ಜಂಬೂಸವಾರಿಗೆ ಗಜಪಡೆ ಸನ್ನದ್ಧ; ಸಿಡಿಮದ್ದು ತಾಲೀಮು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಗಜಪಡೆ ಸನ್ನದ್ದವಾಗಿದ್ದು, ಇಂದು ಸಿಡಿಮದ್ದು ತಾಲೀಮು ನಡೆಸಲಾಯಿತು.
ಈಗಾಗಲೇ ಕಾಲ್ನಡಿಗೆ, ಭಾರ ಹೊರುವ ತಾಲೀಮು ನಡೆಸಿ ಸೈ ಎನಿಸಿಕೊಂಡಿರುವ ಗಜಪಡೆ, ಈಗ ಮೊದಲ ಹಂತದ ಕುಶಾಲತೋಪು ತಾಲೀಮನ್ನು ಯಶಸ್ವಿಯಾಗಿ ಮುಗಿಸಿವೆ. ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಜಾಗದಲ್ಲಿ ತಾಲೀಮು ನಡೆಯಿತು. 7 ಫಿರಂಗಿ ಗಾಡಿಗಳನ್ನು ಮೂರು ಸುತ್ತಿನಲ್ಲಿ 21 ಸಿಡಿಮದ್ದು ಸಿಡಿಸಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಯನ್ನು ಸನ್ನದ್ದಗೊಳಿಸಲಾಯಿತು. ಸಿಡಿಮದ್ದಿನ ಭಾರಿ ಪ್ರಮಾಣದ ಶಬ್ದಕ್ಕೆ ಕ್ಯಾಪ್ಟನ್ ಅಭಿಮನ್ಯು ಕೊಂಚವೂ ಅಲುಗಾಡದೆ ಗಾಂಭೀರ್ಯತೆ ತೋರಿದ್ರೆ, ಧನಂಜಯ, ಹೊಸದಾಗಿ ಬಂದಿರುವ ಅಶ್ವತ್ಥಾಮ ಹಾಗೂ ಲಕ್ಷ್ಮೀ ಆನೆಗಳು ಬೆದರಿದವು.
ಸಿಡಿಮದ್ದು ತಾಲೀಮಿನಲ್ಲಿ ಪಾಲ್ಗೊಂಡು ಅಶ್ವಾರೋಹಿ ಪಡೆ ಸಿದ್ದತೆಯನ್ನು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವೀಕ್ಷಣೆ ಮಾಡಿದರು. ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಬಳಿ ಮಾತನಾಡಿದ ಅವರು, ದಸರಾ ಹಿನ್ನೆಲೆಯಲ್ಲಿ ವಿದೇಶಿಗರು ವಾಸವಾಗಿರುವ ಸ್ಥಳಗಳು, ಪ್ರವಾಸಿತಾಣಗಳು ಹಾಗೂ ಪ್ರವಾಸಿಗರ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಜತೆಗೆ ಮೈಸೂರು ನಗರದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲು ರಾತ್ರಿ ಗಸ್ತು ಹೆಚ್ಚಿಸಲಾಗಿದೆ ಎಂದರು.




