ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ನೂಕಾಟ ಕೇಸ್ – ಸಿಐಡಿಯಿಂದ ತನಿಖೆ ಚುರುಕು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದ ಬಿಜೆಪಿ ಮಹಿಳಾ ಸದಸ್ಯರನ್ನು ನೂಕಿದ ಪ್ರಕರಣವೀಗ ಸಿಐಡಿ ತನಿಖೆಗೆ ವಹಿಸಲಾಗಿದೆ. ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 9 ರಂದು ಮಹಾಲಿಂಗಪುರ ಪುರಸಭೆ ಆವರಣದಲ್ಲಿ ಗಲಾಟೆ ಘಟನೆ ನಡೆದಿತ್ತು. ಈ ವೇಳೆ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಮಹಾಲಿಂಗಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಶಾಸಕ ಸಿದ್ದು ಸವದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತನಿಖಾ ಸಂಸ್ಥೆಗೆ ವಹಿಸುವಂತೆ ಆಗ್ರಹಿಸಿದ್ದರು.
ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದು, ಸಿಐಡಿ ಅಧಿಕಾರಿಗಳು ಮಹಾಲಿಂಗಪುರಕ್ಕೆ ಆಗಮಿಸಿ ವಿಚಾರಣೆ ಕೈಗೊಂಡಿದ್ದಾರೆ.ನೂಕಾಟಕ್ಕೆ ಒಳಗಾಗಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಹಾಗೂ ಪುರಸಭೆ ಸದಸ್ಯರನ್ನು ಆರು ಜನ ಸಿಐಡಿ ಅಧಿಕಾರಿಗಳ ತಂಡದಿಂದ ವಿಚಾರಣೆ ನಡೆದಿದ್ದು.ಬೆಂಗಳೂರು ಸಿಐಡಿ ಉಪಾಧೀಕ್ಷಕಿ ಸತ್ಯವತಿ ಎಸ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು. ಬೆಂಗಳೂರಿನಿಂದ ಬಂದಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಪುರಸಭೆಯಲ್ಲಿ ನಿನ್ನೆ ತಡ ರಾತ್ರಿ ಎಂಟರವರೆಗೆ ವಿಚಾರಣೆ ನಡೆಸಿ, ಇವತ್ತು ಚಾಂದಿನಿ ನಾಯಕ್ ಅವರ ಪತಿ ನಾಗೇಶ್ ನಾಯಕ್ ವಿಚಾರಣೆ ನಡೆಸುತ್ತಿದ್ದು. ಪುರಸಭೆ ಸದಸ್ಯೆರಾದ ಚಾಂದಿನಿ ನಾಯಕ್,ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ಅವರನ್ನು ಎಳೆದಾಡಿ ನೂಕಾಡಲಾಗಿತ್ತು. ಶಾಸಕ ಸಿದ್ದು ಸವದಿ ಚಾಂದಿನಿ ನಾಯಕ್ ಅವರನ್ನು ನೂಕಿದ ಹಿನ್ನೆಲೆಯಲ್ಲಿ ಗರ್ಭಪಾತವಾಗಿತ್ತು. ಆ ಬಳಿಕ ಶಾಸಕ ಸಿದ್ದು ಸವದಿ ಸೇರಿದಂತೆ 31 ಜನರ ವಿರುದ್ದ ಜಿಲ್ಲಾ ಕೋರ್ಟ್ ನಲ್ಲಿ ಜಾತಿನಿಂದನೆ, ದೌರ್ಜನ್ಯ ಕೇಸ್ ದಾಖಲಾಗಿತ್ತು. ನಂತರ ಹೈಕೋರ್ಟ್ ನಲ್ಲೂ ದೂರು ದಾಖಲಿಸಲಾಗಿತ್ತು.
ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ,ಗೋದಾವರಿ ಬಾಟ್ ಬಿಜೆಪಿ ಪುರಸಭೆ ಸದಸ್ಯರಾಗಿದ್ದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಮುಂದಾಗಿದ್ದರು. ಬಹುಮತ ಸಾಬೀತು ವೇಳೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ಶುರುವಾಗಿ ಮಹಾಲಿಂಗಪುರ ಪುರಸಭೆ ಮುಂದೆ ಬಾರಿ ಗದ್ದಲ ನೂಕಾಟ ತಳ್ಳಾಟ ನಡೆದಿತ್ತು. ಇದೀಗ ಸಿಐಡಿ ತನಿಖೆಯ ನಡೆಯುತ್ತಿದ್ದು, ಶಾಸಕ ಸಿದ್ದು ಸವದಿಗೆ ಸಂಕಷ್ಟ ಎದುರಾಗಿದೆ.




