ಕೊಡಗು ಜಿಲ್ಲೆಗೆ ಲಾಕ್ಡೌನ್ನಲ್ಲಿ ಸ್ವಲ್ಪ ವಿನಾಯಿತಿ : ವಾರದ 5 ದಿನ 6 ರಿಂದ 2ರ ವರೆಗೆ ಓಪನ್

ಕೊಡಗು ಜಿಲ್ಲೆಯಲ್ಲಿ ಕೋವಿಡ್ – 19 ಸೋಂಕನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ ಹಾಲಿ ಜಾರಿಯಲ್ಲಿರುವ ಸರ್ಕಾರದ ಲಾಕ್ಡೌನ್ ಆದೇಶವನ್ನು ಗಮನದಲ್ಲಿರಿಸಿಕೊಂಡು, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಈ ಕೆಳಕಂಡ ಅಂಶಗಳಂತೆ ಹಾಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಯಮಾವಳಿಗಳನ್ನು ಜುಲೈ 5 ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 19ರ ಬೆಳಿಗ್ಗೆ 6 ಗಂಟೆಯವರೆಗೆ ಕೆಲವು ಬದಲಾವಣೆಗಳೊಂದಿಗೆ ಜಾರಿಗೊಳಿಸಲಾಗಿದೆ.
ಈ ಹೊಸ ನಿಯಮಗಳಂತೆ ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಚಟುವಳಿಕೆಗಳು ಇರುವುದಿಲ್ಲ. ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು ದಾಸ್ತಾನು ಕೇಂದ್ರಗಳು, ಮೀನು ಮತ್ತು ಮಾಂಸದ ಮಳಿಗೆಗಳನ್ನು, ಹಾಪ್ ಕಾಮ್ಸ್ ಮಳಿಗೆಗಳನ್ನು ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ.
ಕೃಷಿ ಪರಿಕರವಾದ ರಸಗೊಬ್ಬರವನ್ನು ರೈತರು ಈಗಾಗಲೇ ನಿಗದಿಪಡಿಸಿರುವ ದಿನಗಳಲ್ಲಿ (ಸೋಮವಾರ ದಿಂದ ಶುಕ್ರವಾರದವರೆಗೆ) ನಿಗದಿಪಡಿಸಿದ ಸಮಯದಲ್ಲಿ (ಬೆಳಿಗ್ಗೆ 6 ರಿಂದ ಮಧ್ಯಾಹ್ನ 2) ರಸೀದಿ ಪಡೆದು ಖರೀದಿಸಲು ಹಾಗೂ ಖರೀದಿಸಿದ ಸ್ಥಳದಿಂದ ರೈತರ ಕೃಷಿ ಚಟುವಟಿಕೆಯ ಸ್ಥಳಕ್ಕೆ ಅದೇ ದಿನದಂದು ಸಾಗಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಸಾಗಾಣಿಕೆ ಸಮಯದಲ್ಲಿ ಅಧಿಕೃತವಾದ ರಶೀದಿಯನ್ನು ಹೊಂದಿರಲು ಸೂಚಿಸಲಾಗಿದೆ.
ಕೊಡಗು ಜಿಲ್ಲೆಯ ಸಾರ್ವಜನಿಕರಿಗೆ ಮಳೆಗಾಲಕ್ಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರೈನ್ಕೋಟ್, ಛತ್ರಿ, ಟಾರ್ಲ್ಗಳು, ಬಟ್ಟೆಬರೆ, ಚಪ್ಪಲಿ, ಗಮ್ ಬೂಟು ಮುಂತಾದ ವಸ್ತುಗಳ ಅವಶ್ಯಕತೆ ಇರುವುದರಿಂದ ಇಂತಹ ವಸ್ತುಗಳ ಮಾರಾಟ ಮಳಿಗೆಯನ್ನು ತೆರೆಯಲು ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಿದೆ.
ಪಡಿತರ ನ್ಯಾಯಬೆಲೆ ಮಳಿಗೆಗಳು ಸೋಮವಾರ ದಿಂದ ಶುಕ್ರವಾರದವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ದಿನಪತ್ರಿಕೆಗಳ ಸೆಗ್ರಿಗೇಷನ್ ಮತ್ತು ವಿತರಣೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅನುಮತಿಸಿದೆ.
ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್ ಗಳಲ್ಲಿ ವಿಚಾರಣೆ ನಡೆಸಿ, ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಲ್ಲಿ ಇರಲು ಸೂಚಿಸಲಾಗಿದೆ.
