ಧಾರವಾಡದ ಕವಲಗೇರಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ

ಧಾರವಾಡ : ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಚಿರತೆ ಯೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಹುಟ್ಟು ಹಾಕಿದ್ದು, ಇದರ ಬೆನ್ನಲ್ಲೇ ಈಗ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿಯು ರೈತರೊಬ್ಬರಿಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಕಳೆದ ದಿನ ತಡ ರಾತ್ರಿ ರೈತರೊಬ್ಬರೂ ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದರು. ಈ ಸಂದರ್ಭದಲ್ಲಿ ಚಿರತೆ ಕಾಣಿಸಿದೆ ಎಂದು ಹೇಳಲಾಗುತ್ತಿದೆ. ಚಿರತೆ ನೋಡಿದ ರೈತ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಂಚಾಯತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ಚಿರತೆಯು ಕವಲಗೇರಿ ಗ್ರಾಮದ ಹೊರವಲಯದಲ್ಲಿರುವ ಶಿವಾನಂದ ಕತ್ತಿಯವರ ಕಬ್ಬಿನ ಗದ್ದೆಯಲ್ಲೇ ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಶಿವಾನಂದ ಕತ್ತಿ ಜಮೀನು ಸೇರಿದಂತೆ ಅಕ್ಕ ಪಕ್ಕ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಗ್ರಾಮ ಪಂಚಾಯತಿ ಪಿಡಿಓ ಸೇರಿದಂತೆ ಸಿಬ್ಬಂದಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.
ಕನಕೂರು ಗ್ರಾಮ ಪಂಚಾಯತಿ ವತಿಯಿಂದ ಕವಲಗೇರಿಯಲ್ಲಿ ಜಾಗೃತಿ:
ಕಳೆದ ದಿನ ಕವಲಗೇರಿ ಗ್ರಾಮದ ಹೊರವಲಯದಲ್ಲಿ ಮೂರು ಚಿರತೆಗಳು ಓಡಾಟ ನಡೆಸಿವೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕನಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕವಲಗೇರಿ ಗ್ರಾಮದಲ್ಲಿ, ಪಂಚಾಯತಿ ಪಿಡಿಓ ಅಧಿಕಾರಿ ಸತ್ಯಬಸಪ್ಪಾ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮದ ಜಮೀನುಗಳಿಗೆ ಯಾರು ಕೂಡಾ ಒಬ್ಬೊಬ್ಬರಾಗಿ ತೆರಳದಂತೆ ಹಾಗೂ ಗುಂಪು ಗುಂಪಾಗಿ ನಿಲ್ಲದಂತೆ ಧ್ವನಿ ವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತುದೆ.




