ಕನ್ನಡ ಧ್ವಜಕ್ಕೆ ಬೆಂಕಿ: ಚನ್ನಪಟ್ಟಣದಲ್ಲಿ ರೈತಸಂಘ ಪ್ರತಿಭಟನೆ

ರಾಮನಗರ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿದ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚನ್ನಪಟ್ಟದ ಕಾವೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪುಂಡರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಕನ್ನಡ ನಾಡು,ನುಡಿಯ ವಿಚಾರದಲ್ಲಿ ಎಂಇಎಸ್ನವರು ವಿನಾಕಾರಣ ಪುಂಡಾಟಿಕೆ ಮಾಡುತ್ತಿದ್ದಾರೆ. ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವ ಮೂಲಕ ನಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ. ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಮುಂದೆ ಕನ್ನಡಿಗರ ಮನೆಗೆ ಬೆಂಕಿ ಹಚ್ಚುತ್ತೇವೆ ಎಂಬ ದಾಷ್ಟ್ಯತನ ತೋರಿರುವ ಎಂಇಎಸ್ ಪುಂಡರ ವಿರುದ್ಧ ತಕ್ಷಣ ಕ್ರಮ ಜರುಗಿಸ ಬೇಕು. ಇವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಗಡಿ ಸೇರಿದಂತೆ ನಾನಾ ವಿಚಾರವಾಗಿ ಎಂಇಎಸ್ ಹಾಗೂ ಶಿವಸೇನೆಯ ಪುಂಡರು ಈ ಹಿಂದಿನಿಂದಲೂ ಕಿತಾಪತಿ ನಡೆಸಿಕೊಂಡೆ ಬರುತ್ತಿದ್ದಾರೆ. ಆ ಭಾಗದ ಜನತೆಯ ನೆಮ್ಮದಿಗೆ ಬೆಂಕಿ ಇಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇದೀಗ, ಕನ್ನಡಿಗರ ಭಾವನಾತ್ಮವಾದ ಕನ್ನಡದ ಭಾವುಟಕ್ಕೆ ಬೆಂಕಿ ಹಚ್ಚಿ ಇನ್ನಷ್ಟು ಉದ್ಗಟತನ ತೋರಿದ್ದಾರೆ. ಕನ್ನಡದ ಬಾವುಟಕ್ಕೆ ಬೆಂಕಿ ಹಂಚಿರುವ ಪುಂಡರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಎಂಇಎಸ್ ಮುಖಂಡರಿಗೆ ಮಸಿ ಬಳಿಯುವ ಮೂಲಕ ಕನ್ನಡಪರ ಹೋರಾಟಗಾರರು ಉತ್ತಮವಾದ ಕೆಲಸ ಮಾಡಿದ್ದಾರೆ. ಕನ್ನಡಿಗರನ್ನು ಕೆಣಕಿದರೆ ಗತಿಯೇನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಸಿ ಬಳಿದ ಹೋರಾಟಗಾರರನ್ನು ನಮ್ಮ ವೇದಿಕೆ ಅಭಿನಂದಿಸುತ್ತದೆ. ಅವರೊಂದಿಗೆ ಇಡೀ ಕರುನಾಡು ನಿಲ್ಲಲಿದೆ. ಪದೆಪದೇ ಪುಂಡಾಟ ನಡೆಸುತ್ತಿರುವ ಎಂಇಎಸ್ನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.




