Latestಚಿಕ್ಕಮಗಳೂರುಜಿಲ್ಲಾ ಸುದ್ದಿ

ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ನೌಕರರಿಂದ ಮುಷ್ಕರ

ಚಿಕ್ಕಮಗಳೂರು: ಬ್ಯಾಂಕುಗಳ ಖಾಸಗೀಕರಣ ಮತ್ತು ವಿಲೀನ ಪ್ರಕ್ರಿಯೆ ವಿರೋಧಿಸಿ ಬ್ಯಾಂಕ್ ನೌಕರರಿಂದ ಮುಷ್ಕರ ಎರಡನೇ ದಿನವೂ ಮುಂದುವರಿದಿದ್ದು ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬ್ಯಾಂಕುಗಳ ಖಾಸಗೀಕರಣ ಮತ್ತು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿತ್ತು. ಜಿಲ್ಲೆಯ ಬ್ಯಾಂಕ್ ನೌಕರರು, ಸಿಬ್ಬಂದಿಗಳು ವ್ಯಾಪಕ ಬೆಂಬಲ ನೀಡಿದ್ದಾರೆ. ಗುರುನಾಥ ವೃತ್ತದಲ್ಲಿರುವ ಕೆನರಾ ಬ್ಯಾಂಕ್ ಎದುರು ಜಿಲ್ಲೆಯ ವಿವಿಧ ಬ್ಯಾಂಕ್ ನೌಕರರು, ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡರು.

ಈ ವೇಳೆ ರಾಜ್ಯ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಎಂ ಎಸ್ ಶ್ರೀನಿವಾಸನ್ ಮಾತನಾಡಿ, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದರಿಂದ ಆರ್ಥಿಕತೆಯ ಆದ್ಯತೆ ವಲಯಗಳಿಗೆ ಹಾನಿಯಾಗುತ್ತದೆ. ಬ್ಯಾಂಕ್ ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಕೆಲವೊಂದು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಕ್ಕೆ ಮುಂದಾಗಿದ್ದು, ಇದರಿಂದ ದೇಶದ ಜನರ ಉಳಿತಾಯದ ಹಣಕ್ಕೆ ಲೂಟಿಗೆ ಅವಕಾಶ ನೀಡಿದಂತಾಗುತ್ತದೆ. ಠೇವಣಿದಾರರ ಹಿತಾಸಕ್ತಿಗೂ ಧಕ್ಕೆಯಾಗಲಿದೆ. ಸರ್ಕಾರ ಬ್ಯಾಂಕುಗಳ ಖಾಸಗೀಕರಣ ನೀತಿಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಆರ್ ಬಸವರಾಜ್ ಮಾತನಾಡಿ, ಜೀವವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ, ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಇವೆಲ್ಲವೂ ಪ್ರತಿಗಾಮಿ ಕ್ರಮಗಳಾಗಿದ್ದು, ಇವುಗಳನ್ನು ವಿರೋಧಿಸಲೇಬೇಕಾಗಿದೆ ಎಂದರು.

ರಾಷ್ಟ್ರೀಕರಣದ ಬಳಿಕ ದೇಶದಲ್ಲಿ ಗ್ರಾಮೀಣ ಕ್ಷೇತ್ರದಿಂದ ಠೇವಣಿಗಳ ಒಳಹರಿವು ಮತ್ತು ಕ್ಷೇತ್ರದ ಸಾಲದ ಹೊರ ಹರಿವಿನ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆಯಾಯಿತು. ಇದೀಗ ಖಾಸಗೀಕರಣಗೊಳಿಸುವ ಮೂಲಕ ಬ್ಯಾಂಕುಗಳನ್ನು ಮುಚ್ಚುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button