ಸರ್ಕಾರದ ಪರಿಹಾರದ ಗೈಡ್ ಲೈನ್ ನಿಂದ ಜನರ ಸಮಸ್ಯೆ ಬಗೆಹರಿಸಲಾಗದು: ಹೆಚ್ ಡಿ ಕುಮಾರಸ್ವಾಮಿ
ಮೈಸೂರು : ಮಳೆ ಹಾನಿಯಿಂದಾಗಿ ರಾಜ್ಯದಲ್ಲಿ 5 ರಿಂದ 6 ಲಕ್ಷ ಎಕ್ಟೇರ್ ಬೆಳೆ ನಷ್ಟವಾಗಿದ್ದು, ಸರ್ಕಾರದ ಪರಿಹಾರದ ಗೈಡ್ ಲೈನ್ ನಿಂದ ಜನರ ಸಮಸ್ಯೆ ಸರಿಪಡಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೈಡ್ ಲೈನ್ ವರದಿ ಇಟ್ಟುಕೊಂಡು ಪರಿಹಾರ ಕೊಡೋದು ಸರಿಯಲ್ಲ. ಮೊದಲು ಅದನ್ನ ಬದಿಗೊತ್ತಿ ನಷ್ಟವಾಗಿರುವ ಬಗ್ಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ರಸ್ತೆ, ಬ್ರಿಡ್ಜ್ ಹಾಳಾಗಿದೆ. 20ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಸರ್ಕಾರದಲ್ಲಿರುವ ಮಂತ್ರಿಗಳು ಕಾಟಾಚಾರಕ್ಕೆ ಸರ್ವೆ ಮಾಡಬಾರದು ಎಂದರು.
ಈಗಾಗಲೇ ಸಚಿವರು ಹೋಗಿ ಸರ್ವೆ ಮುಗಿಸಬೇಕಿತ್ತು. ಆದರೆ ಈ ವರೆಗೂ ಸರ್ಕಾರ ಆ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು. ಈ ಸರ್ಕಾರದಲ್ಲಿ ಕೇವಲ ಘೋಷಣೆ ಮಾತ್ರ ಇದೆ. ಕೇವಲ ಹೋಗಿ ಪರಿಹಾರ ಘೋಷಣೆ ಮಾಡ್ತಾರೆ. ಸರ್ಕಾರಕ್ಕೆ ಆಕಾಶ ಮಾತ್ರ ಕಾಣುತ್ತಿದೆ, ಭೂಮಿ ಕಾಣ್ತಿಲ್ಲ. ಕೊಡಗಿನ ಜನರಿಗೆ ಈವರೆಗು ಸರಿಯಾಗಿ ಪರಿಹಾರ ಇಲ್ಲ. ಎಲ್ಲದಕ್ಕೂ ಕೂಡ ಒಂದು ಇತಿ ಮಿತಿ ಇದೆ. ಜನರು ರೊಚ್ಚಿಗೆದ್ದು ನಿಮ್ಮನ್ನ ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದರು.
ರೈತರಿಗೆ ಪರಿಹಾರ ಕೊಡುವುದರಲ್ಲಿ ನೀತಿ ಸಂಹಿತೆ ಅಡ್ಡಿ ಬರಲ್ಲ. ಇದನ್ನ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡರೆ ಆಯಿತು. ಅನುಮತಿ ಪಡೆದು ಪರಿಹಾರ ಕೊಡಬಹುದು. ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ. ಆದರೆ ನನ್ನ ಪ್ರಕಾರದಲ್ಲಿ ಸರ್ಕಾರದಲ್ಲಿ ಹಣ ಇದೆ ಎಂದು ಹೇಳಿದರು.



