“ಗೋವಿಂದ ಗೋವಿಂದ” ಸಿನಿಮಾ 25ಕ್ಕೆ ರಾಜಾದ್ಯಂತ ತೆರೆ

ದಾವಣಗೆರೆ: ಸುಮಂತ್ ಶೈಲೇಂದ್ರ ನಟಿಸಿರುವ ಕಾಮಿಡಿ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಗೋವಿಂದ ಗೋವಿಂದ ಸಿನಿಮಾ ಇದೇ ತಿಂಗಳ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ತಿಲಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ನಾಯಕನಾಗಿ ಸುಮಂತ್ ಶೈಲೇಂದ್ರ ನಟಿಸಿದ್ದಾರೆ. ತಿರುಪತಿ ಎಕ್ಸ್‌ಪ್ರೆಸ್ ನಂತರ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದೆ. ವಿಜಯ್ ಚೆಂಡೂರು ಹಾಗೂ ಪವನ್‌ಕುಮಾರ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸಿದ್ದು, ನಾಯಕಿಯರಾಗಿ ಕವಿತಾಗೌಡ ಹಾಗೂ ಭಾವನಾ ಮೆನನ್ ನಟಿಸಿದ್ದಾರೆ ಎಂದರು.
ಹಲವು ಧಾರಾವಾಹಿಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ತಿಲಕ್, ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್ ಹಾಗೂ ರವಿ ಗರಣಿ ಪ್ರೊಡಕ್ಷನ್ಸ್ ಮೂಲಕ ಶೈಲೇಂದ್ರಬಾಬು, ಕಿಶೋರ್, ಎಂ.ಕೆ. ಮಧುಗಿರಿ ಹಾಗೂ ರವಿ ಆರ್. ಗರಣಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜನಾರ್ದನ್ ರಾಮ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ನಿರ್ದೇಶಕನಾಗಬೇಕೆಂದು ಹೊರಟ ಯುವಕನೊಬ್ಬ ತನ್ನ ಕಲ್ಪನೆಯಲ್ಲಿ ಮಾಡಿಕೊಂಡಿದ್ದ ಕಥೆಯೊಳಗೆ ಬರುವ ಪಾತ್ರಗಳೇ ತನ್ನ ನಿಜ ಜೀವನದಲ್ಲೂ ಎದುರಾದಾಗ ಆತನ ಸ್ಥಿತಿ ಏನಾಗಿರುತ್ತೆ ಎನ್ನುವುದೇ ಚಿತ್ರದ ಒನ್‌ಲೈನ್ ಸ್ಟೋರಿ. ವಿಜಯಪುರದಿಂದ ಬೆಂಗಳೂರಿಗೆ ಬರುವ ಮೂವರು ಪಡ್ಡೆ ಹುಡುಗರು, ಪ್ರತಿಭಾವಂತ ನಿರ್ದೇಶಕ ಹಾಗೂ ಟಾಪ್‌ಮೋಸ್ಟ್ ಹೀರೋಯಿನ್ ಒಬ್ಬಳ ಜೀವನದಲ್ಲಿ ಎಂಟ್ರಿ ಕೊಟ್ಟಾಗ ಅವರ ಲೈಫ್‌ನಲ್ಲಿ ದೊಡ್ಡ ತಿರುವೊಂದು ಜರುಗುತ್ತದೆ ಎಂದು ಹೇಳಿದರು.
ಅದಾದ ನಂತರ ಚಿತ್ರಕಥೆ ಅನೇಕಾನೇಕ ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಾ ಕಾಮಿಡಿಯಾಗಿ ಆರಂಭವಾದ ಕಥೆ ಥಿಲ್ಲರ್‌ಗೆ ಟರ್ನ್ ಆಗುತ್ತದೆ. ಚಿತ್ರದ ಫಸ್ಟ್ ಹಾಫ್ ಕಾಮಿಡಿಯಾಗಿದ್ದರೆ, ಸೆಕೆಂಡ್ ಹಾಫ್ ಥಿಲ್ಲರ್‌ಗೆ ತಿರುಗಿ ಕಾಮಿಡಿಯಲ್ಲಿ ಎಂಡ್ ಆಗುತ್ತದೆ. ಒಟ್ಟು ಆರು ಹಾಡುಗಳ ಜೊತೆಗೆ ಎರಡು ಬಿಟ್‌ಸಾಂಗ್ ಗಳು ಚಿತ್ರದಲ್ಲಿವೆ. ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್ . ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ವಿಜಯಪುರದಲ್ಲಿ 25 ದಿನ ಹಾಗೂ ಮಧುಗಿರಿಯಲ್ಲಿರುವ ಏಷ್ಯಾದಲ್ಲೇ ಅತಿದೊಡ್ಡದು ಎನಿಸಿಕೊಂಡ ಏಕಶಿಲಾಬೆಟ್ಟದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಯು ಪ್ರಮಾಣ ಪತ್ರ ಪಡೆದಿದೆ ಎಂದು ಮಾಹಿತಿ ನೀಡಿದರು.




