ಉತ್ತರ ಕನ್ನಡಜಿಲ್ಲಾ ಸುದ್ದಿ

ಉತ್ತರ ಕನ್ನಡ : ಭೀಮಣ್ಣ ನಾಯ್ಕರಿಗೆ ಘೋಷಣೆಯಾದ ಎಂಎಲ್‌ಸಿ ಟಿಕೆಟ್‌

ಕಾರವಾರ : ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರಕನ್ನಡ ಜಿಲ್ಲೆಗೆ ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್‌ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ವಿಧಾನ ಪರಿಷತ್‌ ಚುನಾವಣೆ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಕಾಂಗ್ರೆಸ್‌ ಅಭ್ಯರ್ಥಿ ಎಂದು ಭೀಮಣ್ಣ ನಾಯ್ಕ ಅವರನ್ನು ಬಿಂಬಿಸಲಾಗಿತ್ತು.ಹಾಗಂತ ಪಕ್ಷದಲ್ಲಿ ಆಕಾಂಕ್ಷಿಗಳಿಲ್ಲ ಎಂಬ ಅರ್ಥವಲ್ಲ.ಇಲ್ಲೂ ಕೂಡ ಸಾಕಷ್ಟು ಆಕಾಂಕ್ಷಿಗಳಿದ್ದರು. ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಉದ್ಯಮಿ ಯಶೋಧರ ನಾಯ್ಕ, ಸಾಯಿ ಗಾಂವ್ಕರ್‌, ಶಿರಸಿಯ ರವೀಂದ್ರನಾಥ ನಾಯ್ಕ ಮತ್ತು ಶ್ರೀಪಾದ ಹೆಗಡೆ ಕಡವೆ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಯಾರು ಏನೇ ಹೇಳಿದರೂ ಈಗಿನ ಚುನಾವಣೆ ಕಾಂಚಾಣದ ಬಲದ ಮೇಲೆ ನಿಂತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಜೊತೆಗೆ ಜನಬಲ, ಅಧಿಕಾರದ ಬಲ ಕೂಡ ಬೇಕು. ಇದನ್ನೆಲ್ಲ ಸರಿಸಮಾನವಾಗಿ ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಭೀಮಣ್ಣನವರಲ್ಲಿ ಮಾತ್ರ ಇದೆ ಎಂಬುದು ಕಾಂಗ್ರೆಸ್‌ ಹೈಕಮಾಂಡ್‌ಗೆ ಚೆನ್ನಾಗಿ ತಿಳಿದಿತ್ತು.

ಹೀಗಾಗಿ ಭೀಮಣ್ಣ ಅವರ ಹೆಸರನ್ನು ಫೈನಲ್‌ ಮಾಡಲಾಗಿತ್ತು. ಇತ್ತೀಚಿನ ಕೆಲ ದಿನಗಳ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ನ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಭೀಮಣ್ಣ ನಾಯ್ಕ ಅವರಿಗೆ ಫೈನಲ್‌ ಆದ ಟಿಕೆಟ್‌ ತಪ್ಪಿಸಿ, ತಮ್ಮ ಆತ್ಮೀಯರಿಗೆ ಕೊಡಿಸುವ ಯತ್ನ ನಡೆದಿದೆ ಎಂಬ ಸುದ್ದಿ ಜಿಲ್ಲೆಯ ಕಾಂಗ್ರೆಸ್‌ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಮಾಜಿ ಶಾಸಕರು, ಇತರೆ ಪ್ರಮುಖರು ಭೀಮಣ್ಣ ಅವರಿಗೆ ಟಿಕೆಟ್‌ ತಪ್ಪಿದರೆ ಖಂಡಿತ ವಿರೋಧ ಪಕ್ಷದ ಅಭ್ಯರ್ಥಿ ಕಣ್ಮುಚ್ಚಿ ಗೆಲ್ಲುತ್ತಾರೆ. ಟಫ್‌ ಫೈಟ್‌ ಆಗಬೇಕೆಂದಿದ್ದರೆ ಭೀಮಣ್ಣ ಅವರಿಗೆ ಟಿಕೆಟ್‌ ನೀಡಿ ಎಂದು ತಮ್ಮ ಅಭಿಪ್ರಾಯವನ್ನು ಗಟ್ಟಿ ಧ್ವನಿಯಲ್ಲಿಯೇ ಸಲ್ಲಿಸಿದ್ದರಂತೆ. ಕೊನೆಗೂ ಎಲ್ಲ ಮುಖಂಡರ ಒತ್ತಡಕ್ಕೆ ಮಣಿದ ದೇಶಪಾಂಡೆ ಅಂತಿಮವಾಗಿ ಭೀಮಣ್ಣ ಅವರಿಗೆ ಟಿಕೆಟ್‌ ನೀಡಲು ಒಪ್ಪಿಗೆ ಸೂಚಿಸಿದರಂತೆ.ಇಷ್ಟೆಲ್ಲ ರಾಜಕಾರಣದ ನಂತರ ಭೀಮಣ್ಣ ಅವರಿಗೆ ಟಿಕೆಟ್‌ ಘೋಷಿಸಲಾಯಿತು ಎಂದು ಕಾಂಗ್ರೆಸ್ ಮೂಲದಿಂದ ತಿಳಿದು ಬಂದಿದೆ.

ಒಟ್ಟಾರೆ ಕಾಂಗ್ರೆಸ್‌ ಟಿಕೆಟ್‌ ಭೀಮಣ್ಣ ಅವರಿಗೆ ದೊರೆತಿರುವುದರಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಟಫ್‌ ಫೈಟ್‌ ನಡೆಯಲಿದ್ದು, ಚುನಾವಣಾ ಕಣ ರಂಗೇರಿದೆ.

Spread the love

Related Articles

Leave a Reply

Your email address will not be published. Required fields are marked *

Back to top button