ಆನೆಗಳ ಉಪಟಳದಿಂದ ಬೇಸತ್ತು ಬೇಸಾಯ ಬಿಡುತ್ತಿರುವ ರಾಮನಗರ ರೈತರು

ರಾಮನಗರ: ಜಿಲ್ಲೆಯ ರೈತರು ಕಾಡಾನೆಗಳ ದಾಳಿಯಿಂದಾಗಿ ಬೇಸತ್ತು ಹೋಗಿದ್ದಾರೆ. ಕಷ್ಟಪಟ್ಟು ಸಾಲ ಮಾಡಿಬೆಳೆದ ಕೃಷಿ ಬೆಳೆಗಳು ಹಾಳಾಗುತ್ತಿವೆ.
ಕಾಡಾನೆಗಳ ದಾಳಿಗೆ ಸರ್ಕಾರದಿಂದ ಬರುವ ಪರಿಹಾರ ಮಾತ್ರ ಕೂಲಿಗೂ ಸಾಕಾಗುವುದಿಲ್ಲ. ಆದರೆ ಸರ್ಕಾರ ಮಾತ್ರ ಪರಿಹಾರ ನೀಡಿರುವ ಬಗ್ಗೆ ಮಾಹಿತಿ ನೀಡುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಕಾಡಾನೆಗಳಿದ್ದು, ರೈತರು ಬೆಳೆದ ಬೆಳೆಗಳನ್ನೆಲ್ಲಾ ನಾಶ ಮಾಡುತ್ತಿವೆ. ಈಗ ಕೇವಲ ಒಂದು ಆನೆಯನ್ನ ಸೆರೆ ಹಿಡಿದಿರುವ ಅರಣ್ಯ ಇಲಾಖೆ, ಇನ್ನು ಕೆಲ ಆನೆಗಳನ್ನ ಹಿಡಿಯಬೇಕಿದೆ. ರೇಷ್ಮೆನಗರಿ ರಾಮನಗರ ಜಿಲ್ಲೆಯ ರೈತರು ಕಾಡಾನೆಗಳ ದಾಳಿಯಿಂದಾಗಿ ವ್ಯವಸಾಯವೇ ಬೇಡ ಎನ್ನುವ ದುಸ್ಥಿತಿಗೆ ಬಂದಿದ್ದಾರೆ.
ಜಿಲ್ಲೆಯ ಕನಕಪುರ, ರಾಮನಗರ, ಚನ್ನಪಟ್ಟಣದಲ್ಲಿ ಹೆಚ್ಚಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದು, ಮಾಗಡಿಯಲ್ಲಿಯೂ ಸಹ ಈಗೀಗ ಹೆಚ್ಚಾಗಿದೆ. ಇನ್ನು ಕಳೆದ ಕೆಲದಿನಗಳ ಹಿಂದೆ ಹಾಸನದ ಸಕಲೇಶಪುರದಿಂದ ವಲಸೆ ಬಂದಿದ್ದ ಮೌಂಟೇನ್ ಹೆಸರಿನ ಸಲಗವನ್ನ ಚನ್ನಪಟ್ಟಣದ ಗುಡ್ಡೆ ಅವ್ವೇರಹಳ್ಳಿ ಗ್ರಾಮ ವ್ಯಾಪ್ತಿಯ ಕಾಡಿನಲ್ಲಿ ಸೆರೆ ಹಿಡಿಯಲಾಗಿತ್ತು. ಆದರೆ ಇದನ್ನ ಹೊರತುಪಡಿಸಿ ಕನಕಪುರ, ರಾಮನಗರ, ಚನ್ನಪಟ್ಟಣ ಭಾಗದಲ್ಲಿ 48 ಕಾಡಾನೆಗಳ ದಂಡು ಬೀಡುಬಿಟ್ಟಿ ಎನ್ನುವ ಮಾಹಿತಿ ಇದೆ.
ಇನ್ನು ಚನ್ನಪಟ್ಟಣ – ಕನಕಪುರ ಭಾಗದಲ್ಲಿಹೆಚ್ಚು ನೀರಾವರಿ ಇರುವ ಕಾರಣ ಆಹಾರ, ನೀರನ್ನ ಹರಸಿಕೊಂಡು ಆನೆಗಳು ರೈತರ ಕೃಷಿ ಭೂಮಿಯ ಮೇಲೆ ದಾಳಿ ಮಾಡ್ತಿವೆ. ಆದರೆ ಈ ವಿಚಾರವಾಗಿ ಆಡಳಿತ ನಡೆಸುವ ಯಾವ ರಾಜ್ಯ ಸರ್ಕಾರಗಳು ಸಹ ಶಾಶ್ವತ ಪರಿಹಾರ ನೀಡುತ್ತಿಲ್ಲ. ಬದಲಾಗಿ ಕವಡೆ ಕಾಸು ನೀಡುತ್ತಿದ್ದಾರೆ. ಇದರಿಂದಲೇ ರೈತರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎನ್ನುತ್ತಾರೆ ರೈತ ಮುಖಂಡ ಸಿ.ಪುಟ್ಟಸ್ವಾಮಿ.
ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಸದ್ಯ ರಾಮನಗರ ಜಿಲ್ಲೆಯಲ್ಲಿ ಒಟ್ಟು 29 ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಪ್ರಮುಖವಾಗಿ ಕಬ್ಬಾಳು, ಸಾತನೂರು, ಅಚ್ಚಲು, ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ವಾಸಮಾಡ್ತಿವೆ. ಬನ್ನೇರುಘಟ್ಟ, ಕಾವೇರಿ ವನ್ಯಜೀವಿ ಧಾಮದಿಂದ ಜಿಲ್ಲೆಗೆ ಆನೆಗಳು ಬರುತ್ತಿವೆ. ನಾವು ಸಹ ಅವುಗಳನ್ನ ಕಾಡಿಗೆ ಓಡಿಸಲು ಪ್ರಯತ್ನ ಮಾಡ್ತಿದ್ದೇವೆ ಎನ್ನುತ್ತಾರೆ.
ಕಳೆದ ವರ್ಷ ರಾಮನಗರ ಜಿಲ್ಲೆಯ ರೈತರಿಗೆ ಆನೆಗಳ ದಾಳಿಯಿಂದಾಗಿ ಬೆಳೆ ಕಳೆದುಕೊಂಡವರಿಗೆ ಸರ್ಕಾರದಿಂದ 1.45 ಕೋಟಿ ರೂ. ಪರಿಹಾರ ನೀಡಿದ್ದೇವೆಂದು ಅರಣ್ಯಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಸರ್ಕಾರದಿಂದ ಕೋಟಿ ಕೋಟಿ ಪರಿಹಾರ ಕೊಡುವ ಬದಲಾಲು ಅದೇ ಹಣದಿಂದ ಆನೆಗಳು ಬರದಂತೆ ತಂತಿ ಬೇಲಿ ಕಾರಿಡಾರ್ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ.
ಒಟ್ಟಾರೆ ರಾಮನಗರ ಜಿಲ್ಲೆಯ ರೈತರು ನೆಮ್ಮದಿಯಿಂದ ವ್ಯವಸಾಯ ಮಾಡಬೇಕಾದರೆ ಕಾಡಾನೆಗಳ ಹಾವಳಿಯನ್ನ ಸರ್ಕಾರ ಸಂಪೂರ್ಣವಾಗಿ ತಪ್ಪಿಸಬೇಕಿದ್ದು, ಜಿಲ್ಲೆಯಲ್ಲಿ ಘಟಾನುಘಟಿ ರಾಜಕಾರಣಿಗಳಿದ್ದರೂ ಸಹ ರೈತರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ.




