ಉತ್ತರ ಕನ್ನಡ : ನೆಟ್ವರ್ಕ್ ಸಮಸ್ಯೆಯಿಂದ ಕೋವಿಡ್ ಮೃತ ಕುಟುಂಬಕ್ಕೆ ಪರಿಹಾರದಲ್ಲಿ ವಿಳಂಬ

ಕಾರವಾರ : ಕೋವಿಡ್ ನಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಣೆಯನ್ನೇನೋ ಮಾಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆ ಹಾಗೂ ಸರ್ಕಾರದ ಆದೇಶ ತಿದ್ದುಪಡಿ ಗೊಂದಲದಲ್ಲಿ ಇದೀಗ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ತೊಡಕಾಗಿದ್ದು, ಮೃತ ಕುಟುಂಬಕ್ಕೆ ಪರಿಹಾರ ಸಿಗದಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾದಿಂದ ಇಂದಿನವರೆಗೆ ಸರಕಾರದ ಅಂಕಿ ಅಂಶಗಳ ಪ್ರಕಾರ 770 ಜನರು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ಮೊದಲು ಬಿಪಿಎಲ್ ಕುಟುಂಬದ ಮುಖ್ಯಸ್ಥ ಮೃತರಾದವರಿಗೆ ಮಾತ್ರ 1 ಲಕ್ಷ ರೂ.ಸೀಮಿತ ಮಾಡಿ ಆದೇಶ ಮಾಡಲಾಗಿತ್ತು. ಆದರೆ ತಿದ್ದುಪಡಿ ಆದೇಶದಂತೆ ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ರಾಜ್ಯ ಸರ್ಕಾರದಿಂದ 50 ಸಾವಿರ ರೂ. ದಂತೆ ಮೃತ ಬಿಪಿಎಲ್ ಕುಟುಂಬದ ಯಜಮಾನ ವ್ಯಕ್ತಿ ಮೃತಪಟ್ಟರೆ ಒಟ್ಟು 1 ಲಕ್ಷ ರೂ. ಹಾಗೂ ಉಳಿದಂತೆ ಇತರೆ ಮೃತರಿಗೆ 50 ಸಾವಿರ ನೀಡಲು ಆದೇಶ ನೀಡಲಾಗಿದೆ. ಆದರೆ ಇದೀಗ ನೈಸರ್ಗಿಕವಾಗಿ ಗುಡ್ಡಗಾಡು ಪ್ರದೇಶವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನೆಟ್ಟರ್ಕ್ ಸಮಸ್ಯೆ ಎದುರಾಗಿದೆ.
ಇದರ ಜೊತೆಗೆ ಪರಿಹಾರದ ತಿದ್ದುಪಡಿ ಆದೇಶ ಸಹ ಈವರೆಗೂ ಬಾರದ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಅರ್ಜಿ ಸಲ್ಲಿಸಲು ವಿಳಂಬವಾಗಿದೆ. ಸದ್ಯ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಪಟ್ಟಿ ಮಾಡಿದಂತೆ 179 ಬಿಪಿಎಲ್ ಕಾರ್ಡ್ ಹೊಂದಿದ ಮೃತರ ಕುಟುಂಬದವರು ಮಾತ್ರ ಅರ್ಜಿ ಸಲ್ಲಿಸಿದ್ದು, ಇವೆಲ್ಲವೂ ಆನ್ ಲೈನ್ ನಲ್ಲಿ ಸಲ್ಲಿಸಲಾಗದೇ ಮ್ಯಾನುವಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಹಳ್ಳಿ ಭಾಗದಲ್ಲೇ ಹೆಚ್ಚು ಮೃತರಾದ್ದರಿಂದ ಗ್ರಾ.ಪಂ. ಮೂಲಕ ಗ್ರಾಮಲೆಕ್ಕಿಗ ನವೋದಯ ಆ್ಯಪ್ ಮೂಲಕ ಅರ್ಜಿ ಸ್ವೀಕರಿಸಲು ಆಗದೇ ನೇರವಾಗಿ ಕಾಗದ ಪತ್ರ ವ್ಯವಹಾರಕ್ಕೆ ಸೀಮಿತವಾಗಿದ್ದು,ಪರಿಹಾರ ನೋಂದಣಿಗೆ ತೊಡಕಾಗಿದೆ.
ಜಿಲ್ಲೆಯಲ್ಲಿ ಮೃತಪಟ್ಟಿದ್ದೆಷ್ಟು ? ಅರ್ಜಿ ಸಲ್ಲಿಕೆಯಾಗಿದ್ದೆಷ್ಟು ?
ಜಿಲ್ಲೆಯಲ್ಲಿ ಹಳಿಯಾಳ ತಾಲೂಕಿನಲ್ಲಿ 123 ಜನರು ಕೋವಿಡ್ ಗೆ ಮೃತಪಟ್ಟಿದ್ದು, ಮೊದಲ ಸ್ಥಾನದಲ್ಲಿದೆ.ಎರಡನೇ ಸ್ಥಾನದಲ್ಲಿ ಕಾರವಾರ 117, ಮೂರನೇ ಸ್ಥಾನದಲ್ಲಿ ಶಿರಸಿ – 111 ಜನರು ಮೃತಪಟ್ಟ ದಾಖಲೆಗಳಿವೆ.
ಉಳಿದಂತೆ ಜೊಯಿಡಾ – 17, ಮುಂಡಗೋಡ – 61,ಯಲ್ಲಾಪುರ – 24, ಸಿದ್ದಾಪುರ – 30,ಭಟ್ಕಳ – 62, ಹೊನ್ನಾವರ – 105,ಕುಮಟಾ,ಅಂಕೋಲಾ ತಲಾ 60 ಜನ ಮೃತಪಟ್ಟಿದ್ದಾರೆ. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಕಾರವಾರ, ಹೊನ್ನಾವರದಲ್ಲಿ ಇದುವರೆಗೂ ಯಾವ ಅರ್ಜಿಯೂ ಸಲ್ಲಿಕೆಯಾಗಿಲ್ಲ. ಇನ್ನು ಅಂಕೋಲಾ – 5, ಭಟ್ಕಳ – 6, ದಾಂಡೇಲಿ – 10, ಹಳಿಯಾಳ – 15, ಕುಮಟಾ – 84, ಮುಂಡಗೋಡ – 19, ಸಿದ್ದಾಪುರ – 28, ಶಿರಸಿ – 3, ಜೊಯಿಡಾ – 6,ಯಲ್ಲಾಪುರ – 3 ಮಾತ್ರ ಅರ್ಜಿ ಸಲ್ಲಿಕೆ ಆಗಿದೆ. ಸದ್ಯ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾದ ಎಲ್ಲಾ ಅರ್ಜಿಗಳನ್ನು ನವೋದಯ ಆ್ಯಪ್ ಮೂಲಕ ನೇರವಾಗಿ ಸಲ್ಲಿಸಲಾಗದೆ ಮ್ಯಾನುವಲ್ಲಿ ತೆಗೆದುಕೊಂಡಿದೆ. ಹೀಗಾಗಿ ಕೋವಿಡ್ ನಿಂದ ತಮ್ಮವರನ್ನು ಕಳೆದುಕೊಂಡು ಕುಟುಂಬದವರು ಸರ್ಕಾರದಿಂದ ಸಿಗುವ ಪರಿಹಾರ ಪಡೆಯಲು ಹೆಣಗಾಡುವಂತಾಗಿದೆ.
ರಾಜ್ಯ ಮತ್ತು ಕೇಂದ್ರದಿಂದ ಕೋವಿಡ್ ನಿಂದ ಮೃತರಾದ ಕುಟುಂಬಕ್ಕೆ ಸಹಾಯವಾಗಲಿ ಎಂದು ಪರಿಹಾರ ಘೋಷಣೆಯನ್ನೇನೋ ಮಾಡಿದೆ ಆದರೆ ಪದೇ ಪದೇ ಆದೇಶ ತಿದ್ದುಪಡಿ ಹಾಗೂ ಜಿಲ್ಲೆಯಲ್ಲಿನ ನೆಟ್ವರ್ಕ್ ಸಮಸ್ಯೆಯಿಂದಾಗಿ ಪರಿಹಾರಕ್ಕೆ ಸಂತ್ರಸ್ತ ಕುಟುಂಬ ಪರೆದಾಡುವಂತಾಗಿದ್ದು, ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.




