ದಾವಣಗೆರೆ

ರಸ್ತೆ ಡಾಂಬರೀಕರಣವಾಗಿ ಬಸ್ ಬರುವವರೆಗೂ ಮದುವೆಯಾಗಲಾರೆ; ಯುವತಿ ಪ್ರತಿಜ್ಞೆ

ದಾವಣಗೆರೆ: ಆ ಯುವತಿ ಶಪಥ ಮಾಡಿದ್ದಾಳೆ. ತನ್ನೂರಿ‌ನ ರಸ್ತೆ ಡಾಂಬರೀಕರಣ ಆಗಬೇಕು. ಆ ಬಳಿಕವೇ ಮದುವೆ. ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮದ ಬಿಂದು ಎಂಬಾಕೆಯೇ ಈ ನಿರ್ಧಾರ ತೆಗೆದುಕೊಂಡಿರುವುದು. ಈ ಗ್ರಾಮದ ಯುವಕರಿಗೆ ಹೆಣ್ಣು ಕೊಡುವುದಾಗಲೀ, ಇಲ್ಲಿನ ಯುವತಿಯರ ಮದುವೆಯಾಗಲು ಯುವಕರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ‌ ಕಾರಣ ಈ ಗ್ರಾಮದ ಹಾಳಾಗಿರುವ ರಸ್ತೆ.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಗ್ರಾಮಕ್ಕೆ ಸರಿಯಾದ ರಸ್ತೆನೇ ಇಲ್ಲ. ಒಂದೂವರೆ ಕಿಲೋ ಮೀಟರ್ ರಸ್ತೆಯಾಗಿ ಆ ಊರಿಗೆ ಒಂದು ಸರ್ಕಾರಿ ಬಸ್ ಬಿಟ್ಟರೆ ಆ ಊರಿನ ಚಿತ್ರಣವೆ ಬದಲಾಗುತ್ತೆ. ಆದರೆ ಇದು ಗಡಿ ಗ್ರಾಮ ಅಂತ ಎಲ್ಲ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ಆ ಗ್ರಾಮವೇ ಮೂಲಭೂತ ಸೌಲಭ್ಯ ಇಲ್ಲದಿರುವುದರಿಂದ ಸಂಕಷ್ಟಗಳ ಸರಮಾಲೆಯನ್ನೇ ಮೈಹೊದ್ದುಕೊಂಡಿದೆ.

ಇದು ದಾವಣಗೆರೆ ಜಿಲ್ಲೆ ಮಾಯಕೊಂಡ ಸಮೀಪದ ಹುಬ್ಳಿ ಪಕ್ಕದಲ್ಲಿರೋ ಎಚ್ ರಾಂಪುರ ಗ್ರಾಮದ ಜನರ ಗೋಳಿನ ಪರಿ. ಈ ಗ್ರಾಮದಲ್ಲಿ ಸುಮಾರು 40 ರಿಂದ 50 ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮ ಗುಡ್ಡಗಾಡಿನ ಮಧ್ಯೆ ಇದೆ. ಜಿಲ್ಲೆಯ ಗಡಿ ಗ್ರಾಮ ಆಗಿರೋ ಹೆಚ್. ರಾಂಪುರಕ್ಕೆ ಸರಿಯಾದ ರಸ್ತೆಯೇ ಇಲ್ಲ. ರಸ್ತೆ ಇಲ್ಲದೆ ಇರೋ ಕಾರಣಕ್ಕೆ ಈ ಊರಿಗೆ ಬಸ್ ಕೂಡ ಬರೋದಿಲ್ಲ. ಇದರಿಂದ ಇಲ್ಲಿಯ ಮಕ್ಕಳು ಶಾಲೆಗೆ ಕೂಡ ಹೋಗೊಕೆ ಆಗ್ತಿಲ್ಲ. ಅಲ್ಲದೆ ಗಡಿ ಗ್ರಾಮ ಆಗಿರೋದ್ರಿಂದ ಮೊಬೈಲ್ ನೆಟ್ ವರ್ಕ್ ಕೂಡ ಇಲ್ಲ. ಸುತ್ತಮುತ್ತ ಕಾಡು ಇರುವುದರಿಂದ ಪ್ರಾಣಿಗಳ ಉಪಟಳವೂ ಜಾಸ್ತಿ ಇದೆ.

ಮಕ್ಕಳು ನಡೆದುಕೊಂಡು ಮಾಯಕೊಂಡ ಶಾಲೆಗೆ ಹೋಗಬೇಕು. ಇದರಿಂದ ಕೆಲ ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿಲ್ಲ. ಬಸ್ ಬರೋಲ್ಲ ಎಂಬ ಕಾರಣಕ್ಕೆ ಇಲ್ಲಿನ ಯುವಕರನ್ನು ಮತ್ತು ಯುವತಿಯರನ್ನ ಮದುವೆಯಾಗೋಕೂ ಯಾರೂ ಒಪ್ಪುತ್ತಿಲ್ಲ. ಇದನ್ನ ಗಮನಿಸಿ ಎಚ್ ರಾಂಪುರ ಗ್ರಾಮದ ಬಿಂದು ಎಂಬ ಯುವತಿಯೊಬ್ಬಳು ತಮ್ಮೂರಿಗೆ ರಸ್ತೆಯಾಗಿ ಬಸ್ ಬರೋವರೆಗೂ ಮದುವೆ ಆಗಲ್ಲ ಎಂದು ಶಪಥ ಮಾಡಿದ್ದಾಳೆ.

ಇನ್ನೂ ರಸ್ತೆಯಾಗದೆ ಇರೋದಕ್ಕೆ ಇಲ್ಲಿನ ಗ್ರಾಮಸ್ಥರು ದೂರದ ಊರುಗಳಲ್ಲಿ ಸಂಬಂಧಿಕರ ಮನೆಯಲ್ಲಿ, ಹಾಸ್ಟೆಲ್ ಗಳಲ್ಲಿ ತಮ್ಮ ಮಕ್ಕಳನ್ನಿಟ್ಟು ಓದಿಸುತಿದ್ದಾರೆ. ಇನ್ನೂ ಓದಿದ ಮಕ್ಕಳಿಗೆ ದೊಡ್ಡ ಸಂಬಂಧಗಳನ್ನ ಹುಡುಕುವ ಕೆಲಸವನ್ನ ಇಲ್ಲಿನ ಪೋಷಕರು ಮಾಡ್ತಾರೆ. ಇನ್ನೂ ಗ್ರಾಮಕ್ಕೆ ಸಂಬಂಧ ಬೆಳೆಸೋಕೆ ಅಂತ ಬಂದವರು ಕುಗ್ರಾಮದ ಪರಿಸ್ಥಿತಿಯನ್ನ ನೋಡಿ ನಿಮ್ಮೂರಿನ ಸಂಬಂಧವೇ ಬೇಡ ಅಂತ ತಿರಸ್ಕಾರ ಮಾಡ್ತಾರಂತೆ. ಇನ್ನೂ ಹಾಳಾದ ರಸ್ತೆಯಿಂದ ಬಸ್ ಇಲ್ಲದೆ ವಿದ್ಯಾಭ್ಯಾಸ, ಆಸ್ಪತ್ರೆ ಓಡಾಟ, ಕೆಲಸಕ್ಕೆ ಓಡಾಡುವರಿಗೆ ತುಂಬಾ ತೊಂದರೆ ಅನುಭವಿಸುತಿದ್ದಾರೆ.

ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯ ಶಾಸಕ ಪ್ರೊ. ಲಿಂಗಣ್ಣ ಬಳಿ ಮನವಿ ಮಾಡಿಕೊಂಡರೂ ಪ್ರಯೋಜನ ಶೂನ್ಯ. ಇನ್ನೂ ತಮ್ಮೂರಿ ಸಮಸ್ಯೆ ಬಗ್ಗೆ ಯುವತಿ ಬಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿಗೂ ಕೂಡ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಗಮನ ಹರಿಸಿ ಈ ಊರಿಗೆ ರಸ್ತೆ ನಿರ್ಮಿಸಿಕೊಡುವುದರ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ… ಜೊತೆಗೆ ಊರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನ ಒದಗಿಸಿ ಕುಗ್ರಾಮ ಎಂಬ ಹಣೆಪಟ್ಟಿಯನ್ನ ಕಳಚಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button