ಉಳ್ಳಾಲ: ಬಿಎಂ ಬಾಷಾ ಮನೆಗೆ ಸಂಘಪರಿವಾರ ಮುತ್ತಿಗೆ ಯತ್ನ

ಮಂಗಳೂರು: ಜನಜಾಗೃತಿ ಹೆಸರಲ್ಲಿ ಉಳ್ಳಾಲದ ಮಾಜಿ ಶಾಸಕ ಬಿ ಎಂ ಇದಿನಬ್ಬ ಅವರ ಪುತ್ರ ಬಿಎಂ ಬಾಷಾ ಮನೆಗೆ ಸಂಘಪರಿವಾರದ ಕಾರ್ಯಕರ್ತರು ನುಗ್ಗಲು ಯತ್ನಿಸಿದಾಗ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿರುವ ಪ್ರಕರಣ ಉಳ್ಳಾಲದಲ್ಲಿ ನಡೆದಿದೆ.
ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆಯಲ್ಲಿ ಭಯೋತ್ಪಾದನೆ ಚಟುವಟಿಕೆಯ ಸಂಬಂಧದ ಆರೋಪದಲ್ಲಿ ಬಿಎಂ ಬಾಷಾ ಕುಟುಂಬದ ಸದಸ್ಯನೋರ್ವನನ್ನು ಬಂಧಿಸಲಾಗಿತ್ತು. ಹೀಗಿರುವಾಗ ಜನ ಜಾಗೃತಿಗೊಳಿಸುವುದಾಗಿ ಹೊರಟಿದ್ದ ವಿಎಚ್ಪಿ ಬಜರಂಗದಳ ಕಾರ್ಯಕರ್ತರು ಉಳ್ಳಾಲದ ಬಾಷಾ ಮನೆಯ ಗೇಟ್ ಬಳಿ ಮುತ್ತಿಗೆ ಹಾಕಲು ಮುಂದಾದರು.
“ವಿ ಡಿಮಾಂಡ್ ಲಾ ಎಗೆನೆಸ್ಟ್ ಲವ್ ಜಿಹಾದ್” “ಸಿರಿಯಾ ಐಸಿಸ್ ಉಗ್ರವಾದಿಗಳಿಗೆ ಧಿಕ್ಕಾರ” ಎಂಬಿತ್ಯಾದಿ ಘೋಷಣೆಗಳನ್ನು ಪ್ಲೆಕಾರ್ಡ್ಗಳಲ್ಲಿ ಬರೆದಿದ್ದರು.
ಮತಾಂತರವಾಗಿರುವ ಹಿಂದೂ ಧರ್ಮದ ಮಹಿಳೆ ಮನೆಯಿಂದ ಹೊರಬರಲಿ ಎಂದು ಒತ್ತಾಯಿಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಸಹಿತ ಹಲವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಹಿಂದೂ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿ ವಿಎಚ್ಪಿ ಮುಖಂಡರು ಆ.11ರಂದು ಪೋಸ್ಟರ್ ಚಳವಳಿ ನಡೆಸಲಿರುವುದಾಗಿ ಎರಡು ದಿನಗಳ ಹಿಂದೆ ವಿಎಚ್ಪಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿತ್ತು.




