ರಾಜೀನಾಮೆ ‘ಅಸ್ತ್ರ’ ತೋರಿಸುತ್ತಲೇ ಬಿಎಸ್ವೈ ಹೊಗಳಿದ ಆನಂದ್ ಸಿಂಗ್

ಬೆಂಗಳೂರು: ಬಯಸಿದ ಖಾತೆ ಸಿಗಲಿಲ್ಲವೆಂದು ತೀವ್ರ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ರಾಜೀನಾಮೆಯ ಸುಳಿವು ನೀಡುತ್ತಲೇ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ.
ಹೊಸಪೇಟೆಯಲ್ಲಿನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಬಳಿಕ ಮಾಧ್ಯಮಗಳೊಡನೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಆರಂಭವಾಗಿರುವುದೇ ಇಲ್ಲಿಂದ. ಇಲ್ಲಿಂದಲೇ ಪುನಾರಂಭವೂ ಆಗಬಹುದು ಇಲ್ಲವೆ ಕೊನೆಯೂ ಆಗಬಹುದು ಎಂದರು.
ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದಿದ್ದರೆ ನಾನು ಇಂಥ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ ಅವರು, ಪರೋಕ್ಷವಾಗಿ ಸಿಎಂ ಬೊಮ್ಮಾಯಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಯಡಿಯೂರಪ್ಪನವರು ನಾನು ಕೇಳಿದ್ದನ್ನೆಲ್ಲ ಕೊಟ್ಟಿದ್ದಾರೆ. ಹೊಸ ಜಿಲ್ಲೆ ಕೇಳಿದೆ. ಅದನ್ನೂ ಕೊಟ್ಟರು. ಅವರೇ ಸಿಎಂ ಆಗಿದ್ದಿದ್ದರೆ ನಾನು ಅವರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೆನೇ ಹೊರತು ರಾಜೀನಾಮೆಯಂಥ ನಿರ್ಧಾರ ಮಾಡುತ್ತಿರಲಿಲ್ಲ ಎಂದರು.
ನನ್ನ ರಕ್ಷಣೆಗೆ ನಾಯಕರು ಇದ್ದಾರೆ ಎಂದುಕೊಂಡಿದ್ದೆ. ಆದರೆ ಅದು ಭ್ರಮೆ ಎಂದು ಈಗ ಅನ್ನಿಸುತ್ತಿದೆ ಎಂದು ಒಂದೆಡೆ ಹೇಳುತ್ತಲೇ, ನಮ್ಮ ನಾಯಕರ ಬಗ್ಗೆ ನನಗೆ ನಂಬಿಕೆ ಇದೆ. ಬೆಂಗಳೂರಿಗೆ ಹೋಗುತ್ತಿದ್ದೇನೆ, ಇವತ್ತು ಹೋಗುವುದೊ ನಾಳೆ ಹೋಗುವುದೊ ಎಂಬುದನ್ನು ನಿರ್ಧರಿಸಬೇಕಿದೆ ಎಂದೂ ಹೇಳುವ ಮೂಲಕ, ತಾವೇನು ಕೇಳಿದ್ದಾರೋ ಅದು ಸಿಗುವ ಭರವಸೆ ಇಟ್ಟುಕೊಂಡಿರುವ ಸುಳಿವನ್ನೂ ಕೊಟ್ಟರು.
ಈ ನಡುವೆ ಆನಂದ್ ಸಿಂಗ್ ಮನವೊಲಿಕೆಗೆ ಪ್ರಯತ್ನಗಳು ನಡೆದಿರುವುದಾಗಿ ತಿಳಿದುಬಂದಿದೆ. ಸುರಪುರ ಶಾಸಕ ರಾಜುಗೌಡ ಆನಂಧ್ ಸಿಂಗ್ ಅವರನ್ನು ಭೇಟಿಯಾಗಿ ಮನವೊಲಿಸಲಿದ್ದಾರೆ ಎನ್ನಲಾಗಿದೆ. ರಾಜುಗೌಡ ಜೊತೆಯೇ ಆನಂದ್ ಸಿಂಗ್ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.
