Vinay Kulkarni: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು

ನವದೆಹಲಿ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಗೌಡರನನ್ನು ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸುಪ್ರೀಂಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನು ಅವಧಿಯಲ್ಲಿ ಧಾರವಾಡಕ್ಕೆ ತೆರಳದಂತೆ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಷರತ್ತು ವಿಧಿಸಿದೆ.
ಪ್ರಕರಣ ಹೈಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ಕರ್ನಾಟಕದ ಪರ ವಕೀಲ ನಟರಾಜ್ ಸುಪ್ರೀಂ ಕೋರ್ಟ್ ಗಮನ ಸೆಳೆದರು. ಹೀಗಾಗಿ ಹೈಕೋರ್ಟ್ ಎರಡು ತಿಂಗಳೊಳಗೆ ಪ್ರಕರಣದ ವಿಚಾರಣೆ ನಡೆಸಬೇಕು ಎಂದೂ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮಧ್ಯೆ, ಧಾರವಾಡ ಜಿಲ್ಲಾ ವ್ಯಾಪ್ತಿ ಪ್ರವೇಶಿಸದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ. ಸಾಕ್ಷಿಗಳಿಗೆ ಬೆದರಿಕೆ ಹಾಕಿದರೆ ವಿನಯ್ ಕುಲಕರ್ಣಿ ಜಾಮೀನು ರದ್ದುಪಡಿಸುವ ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದೆ.
ಕಳೆದ ನವೆಂಬರ 5 ರಂದು ಗುರುವಾರ ದಿನ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ವಿನಯ್ ಮನೆಯಿಂದ ಕರೆತಂದಿದ್ದರು. ಬಳಿಕ ಅವರನ್ನು ಧಾರವಾಡ ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದರು. ನಂತರ ಅಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಿದರು. ಬಳಿಕ ಮತ್ತೆ ಕಸ್ಟಡಿಗೆ ಪಡೆದುಕೊಂಡ ಸಿಬಿಐ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ವಿಚಾರಣೆ ನಡೆಸಿದರು. ವಿನಯ ಅವರ ವಿಚಾರಣೆ ಪೂರ್ಣ ನಂತರ ಸಿಬಿಐ ಅಧಿಕಾರಿಗಳು ತಂಡ ವಿನಯ ಕುಲಕರ್ಣಿಯವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟಮಾಡಿತ್ತು. ಅಂದಿನಿಂದ ಇಂದಿನವರೆಗೆ ವಿನಯ್ ಕುಲರ್ಣಿಯವರ ಜೈಲು ಬಂಧಿಯಾಗಿದ್ದರು.
ಪ್ರಕರಣದ ಹಿನ್ನೆಲೆ
ಕಳೆದ 2016 ರ ಜೂನ್ 15 ರಂದು ಧಾರವಾಡದ ಸಪ್ತಾಪುರದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶ್ ಗೌಡ ಗೌಡರನನ್ನು ಉದಯ ಜಿಮ್ ಮುಂಭಾಗದಲ್ಲಿ ಬರ್ಬರವಾಗಿ ಹತ್ತೆ ಮಾಡಲಾಗಿತ್ತು. ಆರಂಭದಲ್ಲಿ ಇದೊಂದು ಆಸ್ತಿ ವಿವಾದಿತ ಕೊಲೆ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು. ಅಲ್ಲದೆ ಸ್ಥಳಿಯ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಅದರೆ ಇದರ ಮೇಲೆ ನಮಗೆ ವಿಶ್ವಾಸವಿಲ್ಲ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲವೆಂದು ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಗೌಡರ ಹಾಗೂ ಸಹೋದರ ಗುರುನಾಥ ಗೌಡರು ಪ್ರಕರಣವನ್ನು ಸಿಬಿಐ ತನಿಖೆ ನೀಡುವಂತೆ ಒತ್ತಾಯ ಮಾಡುತ್ತಲ್ಲೇ ಬರಲಾಗುತಿತ್ತು. ಸೆಪ್ಟೆಂಬರ್ 2019ರಲ್ಲಿ ಸಿಬಿಐ ಹತ್ಯೆ ಪ್ರಕರಣದ ವಿಚಾರಣೆ ಆರಂಭಿಸಿ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ, ಅಂದನ ವಿನಯ್ ಆಪ್ತ ಕಾರ್ಯದರ್ಶಿ ಸೋಮು ನ್ಯಾಮಗೌಡರನ್ನು ಸಿಬಿಐ ಬಂಧನ ಮಾಡಿ ಸದ್ಯ ಜೈಲಿಗೆ ಕಳುಬಿಸಿದ್ದಾರೆ. ಸದ್ಯ ಪ್ರಕರಣದ ಕುರಿತು ಇನ್ನೂ ಸಿಬಿಐ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದು, ಸಿಬಿಐನಿಂದ ಬಂಧನವಾಗಿ ಎಂಟು ತಿಂಗಳ ಬಳಿಕ ಮಾಜಿ ಸಚಿವ ವಿನಯ್ ಕುಲಕರ್ಣಿಯವರಿಗೆ ಜಾಮೀನು ಮಂಜೂರಾಗಿದೆ.
