ಚಾರ್ಮಾಡಿಯಲ್ಲೂ ಭೂಕುಸಿತ; ಮಲೆನಾಡು-ಕರಾವಳಿ ಸಂಪರ್ಕ ಕಡಿತ ಸಾಧ್ಯತೆ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ 7ನೇ ಹಿಮ್ಮುರಿ ತಿರುವಿನ ಸಮೀಪ ಭೂಕುಸಿತ ಸಂಭವಿಸಿದೆ. ಶಿರಾಡಿ ಘಾಟ್ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿರುವ ಬೆನ್ನಲ್ಲೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ ಆರಂಭವಾಗಿದೆ.
ಪರಿಸ್ಥಿತಿ ಬಿಗಡಾಯಿಸಿದರೆ ಮಲೆನಾಡು-ಕರಾವಳಿ ಭಾಗವನ್ನು ಸಂಪರ್ಕಿಸುವ ಎರಡೂ ಹೆದ್ದಾರಿಗಳು ಬಂದ್ ಆಗಲಿದೆ.
ಇಂದು ಚಾರ್ಮಾಡಿ ಘಾಟಿಯ ಭೂಕುಸಿತವಾದ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಜೆಸಿಬಿ ಯಂತ್ರದ ಮೂಲಕ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.
ನಿನ್ನೆಯಷ್ಟೇ ಶಿರಾಡಿ ಘಾಟಿಯ ದೋಣಿಗಾಲ್ ಎಂಬಲ್ಲಿ ರಸ್ತೆ ಮಧ್ಯಭಾಗದಿಂದ ಗುಡ್ಡ ಕುಸಿದು ಸಂಪರ್ಕ ಬಂದ್ ಮಾಡಿ ಚಾರ್ಮಾಡಿ ರಸ್ತೆಯನ್ನು ಪರ್ಯಾಯ ರಸ್ತೆಯಾಗಿ ಬಳಸಲು ಸೂಚಿಸಲಾಗಿತ್ತು. ಈ ಕಾರಣಕ್ಕೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿತ್ತು.
ಘಾಟ್ ರಸ್ತೆಯ ಜಲಧಾರೆಗಳನ್ನು ನೋಡಲು ಪ್ರವಾಸಿಗರು ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸುವುದನ್ನೂ ಈಗಾಗಲೇ ನಿಷೇಧಿಸಲಾಗಿದೆ. ಕೆಲ ಪ್ರವಾಸಿಗರು ವಾರದ ರಜಾದಿನಗಳಲ್ಲಿ ಚಾರ್ಮಾಡಿಯ ರಸ್ತೆಯ ಎಲ್ಲಂದರಲ್ಲಿ ಮೋಜು-ಮಸ್ತಿಯಲ್ಲಿ ತೊಡಗುತ್ತಿದ್ದ ಕಾರಣ ಹೆದ್ದಾರಿ ಗಸ್ತು ವಾಹನಗಳ ಮೂಲಕ ಸಿಬ್ಬಂದಿಗಳು ಮೋಜು-ಮಸ್ತಿಗೆ ಬ್ರೇಕ್ ಹಾಕತೊಡಗಿದ್ದಾರೆ.




