ಕಾಫಿ ಬೆಳೆಹಾನಿ ಸಮೀಕ್ಷೆ ವರದಿ ಸಿದ್ಧಪಡಿಸಿ ಪರಿಹಾರಕ್ಕೆ ಪ್ರಯತ್ನ: ಎಂಎಸ್ ಬೋಜೇಗೌಡ

ಚಿಕ್ಕಮಗಳೂರು: ಅತಿಯಾದ ಮಳೆಯಿಂದ ಸಂಭವಿಸಿರುವ ಕಾಫಿ ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಲಾಗುವುದು. ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ ಎಸ್ ಬೋಜೇಗೌಡ ತಿಳಿಸಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿ, ಕಂದಾಯ, ತೋಟಗಾರಿಕೆ ಹಾಗೂ ಕಾಫಿ ಮಂಡಳಿ ಸೇರಿ ಜಂಟಿ ಸಮೀಕ್ಷೆಯನ್ನು ಈಗಾಗಲೇ ಆರಂಭಿಸಲಾಗಿದೆ. ಸಮೀಕ್ಷೆಯಿಂದ ಸಿಗುವ ಎಲ್ಲಾ ಮಾಹಿತಿ ಕ್ರೂಢೀಕರಿಸಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಫೇಸಿ ಕಾಯ್ದೆ ದುರುಪಯೋಗ ಆಗುತ್ತಿದ್ದು, ಕೇಂದ್ರ ಸರ್ಕಾರದಿಂದ ಸ್ಪಷ್ಟನೆಯನ್ನು ಕೇಳಿದ್ದೇವೆ ಎಂದರು.
ಕಾಫಿ ಸಾಲ ಕೃಷಿಯದ್ದೋ ಅಥವಾ ಕೈಗಾರಿಕಾ ಸಾಲವೋ ಎಂಬುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ವಿಚಾರದಲ್ಲಿ ಸರ್ಕಾರದ ಜೊತೆ ವ್ಯವಹರಿಸುತ್ತೇವೆ. ಮಳೆಯಿಂದ ಉದುರಿರುವ ಕಾಫಿಯನ್ನು ಒಣಗಿಸಲು ಡ್ರೈಯರ್ಗಳಿಗೆ ಸಹಾಯಧನ ನೀಡುವ ಬಗ್ಗೆ ಮಂಡಳಿ ತೀರ್ಮಾನ ಮಾಡಿದೆ ಎಂದು ಮಾಹಿತಿ ನೀಡಿದರು.
ಭೆಯ ಅಧ್ಯಕ್ಷತೆ ವಹಿಸಿದ್ದ ಕೆಪಿಎ ಅಧ್ಯಕ್ಷ ಎಸ್ ಅಪ್ಪಾದೊರೈ ಮಾತನಾಡಿ ಕಾಫಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಶೇ.6ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ಬಿಳಿ ಕಾಂಡಕೊರಕದ ಹಾವಳಿಯಿಂದ ಅರೇಬಿಕ ತೋಟಗಳು ನಾಶವಾಗುತ್ತಿದೆ. ಕಾಫಿ ಸಂಶೋಧನೆಗೆ ಹೆಚ್ಚು ಒತ್ತು ನೀಡಿ ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕಾಫಿ ಬೆಳೆಯುವ ಮೂರೂ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಶಾಶ್ವತ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ಕಾಫಿ ಮಂಡಳಿ ಸಿಇಒ ಡಾ ಕೆ ಜಿ ಜಗದೀಶ್, ಕೆಪಿಎ ಕಾರ್ಯದರ್ಶಿ ಅನಿಲ್ ಸವೂರ್ ಇದ್ದರು.




