ಮಂತ್ರಿಮಂಡಳದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೆಗಣನೆ ; ತುದಿಗಾಲಲ್ಲಿ ನಿಂತವರಿಗೆ ನಿರಾಸೆ

ಕಿರುಗುಂದ ರಫೀಕ್
ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮೊದಲ ಹಂತದ ಮಂತ್ರಿಮಂಡಳದಲ್ಲೇ ಯಾರಿಗಾದರೂ ಓರ್ವರಿಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂಬ ನೀರಿಕ್ಷೆಗೆ ತಣ್ಣೀರು ಎರಚಿದಂತಾಗಿದೆ.
ಮೊದಲ ಹಂತದ ಮಂತ್ರಿಮಂಡಳ ರಚನೆಯಲ್ಲಿ ಜಿಲ್ಲೆಗೆ ಮಂತ್ರಿಸ್ಥಾನ ಕೈತಪ್ಪಿ ಹೋಗಿದೆ. ಸಚಿವ ಸ್ಥಾನಕ್ಕಾಗಿ ತುದಿಗಾಲಲ್ಲಿ ನಿಂತಿದ್ದವರಿಗೆ ಸಹಜವಾಗಿ ಬೇಸರವಾಗಿದೆ. ಅದರಲ್ಲೂ ಪ್ರತೀ ಬಾರಿ ಮಂತ್ರಿಮಂಡಳ ವಿಸ್ತರಣೆ ವೇಳೆ ತಮಗೆ ಮಂತ್ರಿಸ್ಥಾನ ಕೊಡಬೇಕೆಂದು ಒತ್ತಾಯಿಸುತ್ತ ಬಂದಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ತೀವ್ರ ನಿರಾಸೆಯಾಗಿದೆ.
ಆದರೆ ಎಂಪಿ ಕುಮಾರಸ್ವಾಮಿ ತಮಗಾದ ನಿರಾಸೆಯನ್ನು ಹೊರಗೆ ವ್ಯಕ್ತಪಡಿಸಿಲ್ಲ. ಮುಂದಿನ ಕೆಲ ದಿನಗಳಲ್ಲಿ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ನನ್ನನ್ನು ಕರೆಸಿ, ಇಂದಿನ ಸಚಿವ ಸಂಪುಟದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ನೀಡುತ್ತಿಲ್ಲ. ಆದರೆ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿಯೂ, ಮುಂದಿನ ಸಚಿವ ಸಂಪುಟದಲ್ಲಿ ನನ್ನನ್ನು ಪರಿಗಣಿಸುವುದಾಗಿಯೂ ಭರವಸೆ ನೀಡಿದ್ದಾರೆ” ಎಂದು ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಹೊಣೆಯೂ ಇನ್ನು ಬೇರೆ ಜಿಲ್ಲೆಯ ಮಂತ್ರಿ ಹೊರಬೇಕಿದೆ. ಯಡಿಯೂರಪ್ಪ ಸಿಎಂ ಇದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಶೃಂಗೇರಿಯ ಜೀವರಾಜ್ ಅವರಿಗೆ ಈಗ ಆ ಹುದ್ದೆಯಿಲ್ಲ. ಶಾಸಕ ಸಿ.ಟಿ.ರವಿ ಈ ಹಿಂದೆ ತಾವಾಗಿಯೇ ಸಚಿವ ಸ್ಥಾನ ತ್ಯಜಿಸಿ ರಾಷ್ಟ್ರ ರಾಜಕಾರಣಕ್ಕೆ ಧುಮುಕಿರುವುದು ಅಲ್ಲದೆ, ಮುಖ್ಯಮಂತ್ರಿ ಸ್ಥಾನದತ್ತ ನೋಟ ಹರಿಸಿರುವುದರಿಂದ ಮತ್ತೆ ಮಂತ್ರಿಸ್ಥಾನದತ್ತ ಒಲವು ತೋರುವ ಮನಸ್ಥಿತಿ ಹೊಂದಿಲ್ಲ ಎನ್ನಲಾಗುತ್ತಿದೆ.
ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಕಡೂರು ಶಾಸಕ ಬೆಳ್ಳಿಪ್ರಕಾಶ್ ಹಾಗೂ ತರೀಕೆರೆ ಶಾಸಕ ಸುರೇಶ್ ಈ ಮೂವರೂ ಮಾಜಿ ಸಿಎಂ ಯಡಿಯೂರಪ್ಪ ಆಪ್ತರಾಗಿರುವ ಕಾರಣ ಈ ಬಾರಿ ಓರ್ವರಿಗೆ ಮಂತ್ರಿಸ್ಥಾನ ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ವಿರೋಧಿಗಳು ತೆರೆಮರೆಯ ಕಸರತ್ತು ನಡೆಸಿ ಮಂತ್ರಿಸ್ಥಾನ ಕೈತಪ್ಪಿರಬಹುದೇ ಎಂಬ ಅನುಮಾನವೂ ಜಿಲ್ಲೆಯ ಜನತೆಗೆ ಉಂಟಾಗಿದೆ.
