ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ :ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ

ರಾಮನಗರ: ಗ್ರಾಮ ಸಭೆಯಲ್ಲಿ ಕೆಲ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಗ್ರಾಮ ಸಭೆಯನ್ನೇ ಮಾರ್ಗದರ್ಶಿ ಅಧಿಕಾರಿ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಘಟನೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಬೇವೂರು ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮಸಭೆ ಆರಂಭವಾಗುತ್ತಿದ್ದಂತೆ, ಗ್ರಾಮಸಭೆ ಕರೆಯಬೇಕಾದ ನಿಯಮದಂತೆ ಜನರಿಗೆ ಸೂಕ್ತ ಮಾಹಿತಿ ನೀಡದೇ ಸಭೆ ಕರೆಯಲಾಗಿದೆ. ಹತ್ತಿಪ್ಪತ್ತು ಕರಪತ್ರವನ್ನು ಹಂಚಿ, ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೀರಿ ಎಂದು ಸಾರ್ವಜನಿಕರು ಅಧ್ಯಕ್ಷತೆ ವಹಿಸಿದ್ದ ಗಾ.ಪಂ. ಅಧ್ಯಕ್ಷ ರಮೇಶ್, ಪಿಡಿಒ ಹರ್ಷಗೌಡ ವಿರುದ್ಧ ಮುಗಿಬಿದ್ದರು.
ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾ.ಪಂ. ಮಾಜಿ ಸದಸ್ಯ ಮಧುಸೂಧನ್, ಗ್ರಾಮ ಸಭೆ ಕರೆಯಬೇಕಾದರೇ ಗ್ರಾಮದಲ್ಲಿ ಟಾಂಟಾಂ ಹೊಡೆಯಬೇಕು, ಪ್ರತಿ ಮನೆಗೂ ಕರಪತ್ರವನ್ನು ನಿಯಮದಂತೆ ಹಂಚಿಕೆ ಮಾಡಬೇಕು. ಅದನ್ನು ಗಾಳಿಗೆ ತೂರಲಾಗಿದೆ ಎಂದರು.
ಅಲ್ಲದೇ, ವಸತಿ ಯೋಜನೆಯಡಿ ಬೇವೂರು ಗ್ರಾಮದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿಯಮದಂತೆ ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆದರೇ ಇಲ್ಲಿ ಅಧ್ಯಕ್ಷರು, ಕೆಲ ಸದಸ್ಯರುಗಳ ಮತ್ತು ಪಿಡಿಒ ವಸತಿ ಯೋಜನೆಯ ನಿಯಮಗಳನ್ನು ಗಾಳಿಗೆ ತೂರಿ, ಪಕ್ಷಪಾತ ಮತ್ತು ದಬ್ಬಾಳಿಕೆಯಿಂದ ಬೇಕಾಬಿಟ್ಟಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಗ್ರಾ.ಪಂ. ಸದಸ್ಯೆ ಜಯಲಕ್ಷ್ಮಮ್ಮ ರಾಮಯ್ಯ, ಗ್ರಾಮ ಸಭೆಗೂ ನಡೆದ ಹಿಂದಿನ ಸಭೆಯಲ್ಲಿ ನಿಯಮದಂತೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದೀರಿ. ಆದರೇ ನೀವೆ ಕುಳಿತು ಪಟ್ಟಿ ತಯಾರು ಮಾಡಿದ್ದೀರಿ? ಇದನ್ನು ರದ್ದುಪಡಿಸಬೇಕೆಂದರು.
ಈ ವೇಳೆ ಜಯಲಕ್ಷ್ಮ ವಿರುದ್ಧ ಕೆಲ ಸದಸ್ಯರು ಮುಗಿ ಬಿದ್ದರು. ಇದರಿಂದ ಮತ್ತಷ್ಟು ಕೆರಳಿದ ಸದಸ್ಯೆ ಜಯಲಕ್ಷ್ನಮ್ಮ, ಈಗಾಗಲೇ ಮನೆ ಕಟ್ಟಿರುವವರು ಮತ್ತು ಇನ್ನು ಮೂರು ತಿಂಗಳ ನಂತರ ತಳಪಾಯ ಹಾಕುವವರಿಗೆ ವಸತಿ ಯೋಜನೆ ಅನುದಾನ ನೀಡಬಾರದು, ಈಗ ತಳಪಾಯ ಹಾಕಿರುವವರಿಗೆ ಅನುದಾನ ನೀಡಿ, ನೀವು ಈ ಹಿಂದೆ ನಡೆದ ಸಭೆಯಲ್ಲಿ ನಡೆದ ವಾಯ್ಸ್ ರೇಕಾರ್ಡ್ ದಾಖಲೆ ತಮ್ಮ ಬಳಿ ಇದೆ ಎಂದು ಜವಾಬು ನೀಡಿದರು. ಇದಕ್ಕೆ ಸದಸ್ಯೆ ಲತಾಮಣಿ ಕೆಂಚೇಗೌಡ ದನಿ ಸೇರಿಸಿ, ನಿಯಮದಂತೆ ಸಭೆ ನಡೆಸಿ, ಸಾರ್ವಜನಿಕವಾಗಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ನೆರೆದ ಸಾರ್ವಜನಿಕರು ಬೆಂಬಲಕ್ಕೆ ನಿಂತರು ಅಧ್ಯಕ್ಷ ರಮೇಶ್, ಪಿಡಿಒ ಹರ್ಷಗೌಡ ಸೇರಿದಂತೆ ಯಾರು ಉತ್ತರಿಸಲಾಗದೇ ಕಕ್ಕಾಬಿಕ್ಕಿಯಾದರು.
ಇನ್ನು ಗ್ರಾಮ ಸಭೆಗೆ ೩೨ ಇಲಾಖೆಗಳ ಅಧಿಕಾರಿಗಳು ಬರಬೇಕು. ಆದರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶುಸಂಗೋಪನೆ ಅಧಿಕಾರಿ ಬಿಟ್ಟರೇ ಬೇರೆ ಯಾರು ಬಂದಿಲ್ಲ. ಅವರು ಬಾರದೆ ಸಭೆ ಹೇಗೆ ನಡೆಸುತ್ತೀರಿ ಎಂದು ಯುವ ಮುಖಂಡ ಬಿ.ಸಿ. ಯೋಗೇಶ್ ಗೌಡ ಮಾರ್ಗದರ್ಶಿ ಅಧಿಕಾರಿಯಾದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿವೇಕ್ ಅವರನ್ನು ಪ್ರಶ್ನಿಸಿದರು.
ಅಲ್ಲದೇ, ಗ್ರಾಮದಲ್ಲಿರುವ ಮೂರು ಅಂಗನವಾಡಿಗಳಲ್ಲಿ ಎರಡು ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡು, ಬೀಳುವ ಸ್ಥಿತಿಯಲ್ಲಿವೆ ಎಂದು ಅಂಗನವಾಡಿ ಶಿಕ್ಷಕಿಯರು, ಸಿಡಿಪಿಒ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದಾರೆ. ೧೫ ದಿನಗಳಲ್ಲಿ ದುರಸ್ಥಿ ಮಾಡುವುದಾಗಿ ಹೇಳಿದ್ದ ಪಂಚಾಯತಿ ಪಿಡಿಒ ಈ ಬಗ್ಗೆ ಗಮನ ನೀಡಿಲ್ಲ, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮಾಡದಿದ್ದರೇ ಎರಡು ಅಂಗನವಾಡಿಗೆ ಇಟ್ಟಿರುವ ಹಣ ವಾಪಸ್ಸಾಗಲಿದೆ. ಇನ್ನು ಮುಂದಿನ ಸಾಲಿನವರೆಗೂ ಅಂಗನವಾಡಿ ಮಕ್ಕಳು ಸಮುದಾಯ ಭವನದಲ್ಲಿ ಪಾಠ ಕಲಿಯಬೇಕೆ ಎಂದು ಯೋಗೇಶ್ ಗೌಡ ಪಂಚಾಯಿತಿ ಆಡಳಿತ ಮತ್ತು ಮಾರ್ಗದರ್ಶಿ ಅಧಿಕಾರಿನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಸಾರ್ವಜನಿಕರು ಗ್ರಾಮ ಸಭೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಾರ್ಗದರ್ಶಿ ಅಧಿಕಾರಿ ವಿವೇಕ್ ಸಾರ್ವಜನಿಕರು ಮತ್ತು ಕೆಲ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದದೇ ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದರು.ಹಾಗು ಸಭೆಯಲ್ಲಿ ಉಪಾಧ್ಯಕ್ಷೆ ಮಂಗಳಗೌರಮ್ಮ, ಲೆಕ್ಕ ಸಹಾಯಕ ಶಿವಕುಮಾರ್ ಸೇರಿದಂತೆ ಹಲವರಿದ್ದರು.




