ಬಿಜೆಪಿ ತೆಕ್ಕೆಗೆ ಬೆಳಗಾವಿ ಪಾಲಿಕೆ : ಖಾತೆ ತೆರೆದ ಒವೈಸಿ ಪಕ್ಷ, ಎಂಇಎಸ್ಗೆ ಮುಖಭಂಗ

ಬೆಳಗಾವಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದೆ. 25 ವರ್ಷಗಳ ನಂತರ ಚಿಹ್ನೆ ಆಧಾರಿತ ಚುನಾವಣೆ ನಡೆದಿದ್ದು ಪ್ರಥಮ ಬಾರಿ ಸ್ಪರ್ಧಿಸಿರುವ ರಾಷ್ಟ್ರೀಯ ಪಕ್ಷಗಳೇ ಉತ್ತಮ ರೀತಿ ಸಾಧನೆ ತೋರಿವೆ.
ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 36 ವಾರ್ಡ್ ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಮೊದಲ ಬಾರಿಗೆ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ಈ ಮೂಲಕ ಎಂಇಎಸ್ ಪುಂಡಾಟಕ್ಕೆ ಸಂಪೂರ್ಣ ಕಡಿವಾಣ ಬಿದ್ದಂತಾಗಿದೆ.
ಬಿಜೆಪಿ 36, ಕಾಂಗ್ರೆಸ್ 9, ಎಂಇಎಸ್ 2, ಪಕ್ಷೇತರ 10 ಹಾಗೂ ಎಐಎಂಐಎಂ 1 ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಬಿಜೆಪಿ ವಿಜಯೋತ್ಸವದ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ನೂಕು ನುಗ್ಗಲಿನಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಗಳು ಜಖಂಗೊಂಡಿವೆ. ಅಲ್ಲದೇ ಗಾಂಧಿನಗರದ ಅಭ್ಯರ್ಥಿ ಓರ್ವರ ಮನೆ ಮೇಲೆ ಕೂಡ ಕಿಡಿಗೇಡಿಗಳು ದಾಂಧಲೆ ನಡೆಸಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
