ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ

ಧಾರವಾಡ: ಹೊಟ್ಟೆ ಪಾಡಿಗೆ ದಲಿತರು ಬಿಜೆಪಿ ಸೇರುತ್ತಾರೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯವರ ಹೇಳಿಕೆಯನ್ನು ಖಂಡಿಸಿ, ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಬಿದಿಗೆ ಇಳಿದು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧಾರವಾಡ ಜಿಲ್ಲಾ ಗ್ರಾಮಾಂತರ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ವಿರುದ್ಧ ಧಿಕ್ಕಾರ ಕೂಗಿ, ಅವರ ಭಾವಚಿತ್ರ ದಹಿಸುವ ಮೂಲಕ ಆಕ್ರೋಶ ಹೊರ ಹಾಕಿದರು.
ಕೆಲವು ದಲಿತ ನಾಯಕರು ಹೊಟ್ಟೆ ಪಾಡಿಗೆ ಬಿಜೆಪಿ ಸೇರಿದ್ದಾರೆ, ಅವರಿಂದ ದಲಿತರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಎಸ್ಸಿ ಹಾಗೂ ಎಸ್ಟಿ ಸಮುದಾಯಕ್ಕೆ ಅವಮಾನ ಮಾಡುವ ಉದ್ದೇಶದಿಂದಲೇ ಅವರ ಹೇಳಿಕೆ ನೀಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ದಲಿತ ಸಮುದಾಯವನ್ನು ಎಳೆದು ತರುತ್ತಿರುವುದು ಸರಿಯಲ್ಲ. ಕೂಡಲೇ ಸಿದ್ದರಾಮಯ್ಯನವರು ತಮ್ಮ ಹೇಳಿಕಯನ್ನು ಹಿಂದಕ್ಕೆ ಪಡೆದುಕೊಂಡು, ದಲಿತ ಸಮುದಾಯಕ್ಕೆ ಕ್ಷಮೆ ಕೇಳಬೇಕು ಎಂದು ಅಗ್ರಹಿಸಿದರು.




