ಕಾಂಗ್ರೆಸ್ ಸೋಲಿಸಲು ಸಿದ್ದರಾಮಯ್ಯನವರೆ ಸಂದೇಶ ಕೊಡ್ತಾರೆ: ಸಿಟಿ ರವಿ

ಕಲಬುರಗಿ: ಸಿದ್ದರಾಮಯ್ಯ ಆಗಾಗ ವಿಶ್ರಾಂತಿಗೆ ಹೋಗ್ತಾರೆ. ಹೋಗುವಾಗೊಮ್ಮೆ ಕಾಂಗ್ರೆಸ್ ಗೆಲ್ಲಬಾರದು ಎಂಬ ಸಂದೇಶವೊಂದನ್ನ ಕೊಟ್ಟು ಹೋಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ರಾಂತಿಗೆ ಹೋಗುವ ಸಿದ್ದರಾಮಯ್ಯ ಕಾಂಗ್ರೆಸ್ ಗೆಲ್ಲಬಾರದು ಎನ್ನುವ ಸಂದೇಶ ಕೊಡ್ತಾರೆ. ಕೆಲವೊಮ್ಮೆ ನೇರವಾಗಿ ಕೆಲವೊಮ್ಮೆ ಹಿಂಬಾಲಕರ ಮೂಲಕ ಸಂದೇಶ ಕೊಟ್ಟಿದ್ದಾರೆ. ಈ ಬಾರಿ ಡಿಕೆಶಿ ನೇತೃತ್ವದಲ್ಲಿ ಯಾವ ಚುನಾವಣೆ ಗೆಲ್ಲಬಾರದು ಎನ್ನುವ ಸಂದೇಶವನ್ನು ಸಹ ಸಿದ್ದರಾಮಯ್ಯ ಕೊಟ್ಟಿದ್ದಾರೆ ಅಂತ ಹೇಳಿದರು.
ಈ ಹಿಂದೆ ಜಿ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸೋಲಿಸುವ ಸಂದೇಶ ಕೊಟ್ಟಿದ್ರು ಎಂದು ಆಪಾದಿಸಿದ ಅವರು, ಹದಿನೆಂಟು ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ತನ್ನ ವರ್ಕಿಂಗ್ ಟೀಮ್ ಕಟ್ಟಿಕೊಳ್ಳುವುದಕ್ಕೆ ಆಗುತ್ತಿಲ್ಲ. ಇಂತವರು ಇಲ್ಲದೆ ಇರೋ ಮುಖ್ಯಮಂತ್ರಿ ಖುರ್ಚಿಗೆ ಟವೆಲ್ ಹಾಕ್ತಿದ್ದಾರೆ. ಪಕ್ಷದ ತಂಡವನ್ನೇ ಕಟ್ಟಿಕೊಳ್ಳುವುದಕ್ಕೆ ಆಗದ ಇವರು ಹಗಲು ಕನಸು ಕಾಣುವ ನೈತಿಕತೆ ಇವರಿಗೆ ಎಲ್ಲಿದೆ ಅಂತ ಪ್ರಶ್ನಿಸಿದರು.
ಕಲಬುರಗಿಯಲ್ಲಿ ಬದಲಾವಣೆ ಖಚಿತ
ಕಲ್ಯಾಣ ಕರ್ನಾಟಕ ಹಿಂದೆ ಉಳಿಯಲು ಕಾರಣ ಕಾಂಗ್ರೆಸ್ ನವರು. ಇವರಿಗೆ ಇಲ್ಲಿನ ಜನ ತಕ್ಕ ಪಾಠ ಕಲಿಸುತ್ತಾರೆ. ಕಲಬುರಗಿಯಲ್ಲಿ ಬದಲಾವಣೆ ಖಚಿತವಾಗಿದೆ. ಈ ಭಾಗದ ಅಭಿವೃದ್ಧಿ ವೇಗ ನೀಡಲು ಬಿಜೆಪಿಗೆ ಒಂದು ಅವಕಾಶ ಬೇಕು. ಬಿಜೆಪಿ ಮೂರು ಮಹಾನಗರ ಪಾಲಿಕೆಯಲ್ಲೂ ಅಧಿಕಾರಕ್ಕೆ ಬರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ ನುಡಿದರು.
