Hawksbill: ಪಶ್ಚಿಮ ಕರಾವಳಿಯಲ್ಲಿ ಮೊದಲ ಬಾರಿ ಪತ್ತೆಯಾದ “ಗಿಡುಗ” ಆಮೆ ಕಳೆಬರ

ಕಾರವಾರ : ಪಶ್ಚಿಮ ಕರಾವಳಿಯಲ್ಲಿಯೇ ಮೊದಲಬಾರಿ ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಬೇಧ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ ಸ್ಥಳೀಯ ಭಾಷೆಯಲ್ಲಿ “ಗಿಡುಗ ಆಮೆ” ಎಂದು ಕರೆಯಲ್ಪಡುವ ಅಪರೂಪದ ಆಮೆ ಕಾರವಾರದ ತಿಳುಮಾತಿ ಬೀಚ್ ಬಳಿ ಅದರ ಕಳೆಬರಹವನ್ನು ಕಡಲ ಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ.
ಈ ಆಮೆಯು ಸಮುದ್ರ ಆಮೆಗಳಲ್ಲಿಯೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು, ಇದರ ಮುಖವು ಗಿಡುಗನ ಮುಖದಂತೆ ಹೋಲುತ್ತದೆ. ದೇಹದ ಮೇಲೆ ಹುಲಿಯ ದೇಹದಂತೆ ಪಟ್ಟೆಗಳಿದ್ದು, ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಫೆಸಿಪಿಕ್ ಮತ್ತು ಅಟ್ಲಾಂಟಿಕಾ ಸಾಗರಗಳಲ್ಲಿ ಹಾಗೂ ಅಂಡಮಾನ್, ನಿಕೋಬಾರ್ ನ ಆಳವಿಲ್ಲದ ಕಡಲಲ್ಲಿ, ಹವಳದ ದಿಬ್ಬಗಳ ನಡುವೆ ಕಂಡು ಬರುತ್ತದೆ.
ಇದು 4000 ಕಿಲೋಮೀಟರ್ ಗೂ ಹೆಚ್ಚು ದೂರ ಸಮುದ್ರದಲ್ಲಿ ಪ್ರಯಾಣ ಬೆಳೆಸುವ ಸಾಮರ್ಥ್ಯ ಹೊಂದಿದೆ. ಒಂದು ಮೀಟರ್ ಉದ್ದ,100 ಕಿಲೋಗ್ರಾಮ್ ತೂಕವಿರುವ ಈ ಆಮೆ 2 ರಿಂದ 3 ವರ್ಷಗಳಿಗೊಮ್ಮೆ ಮಿಲನದ ನಂತರ ಮೊಟ್ಟೆಯಿಡುತ್ತದೆ. ಇದರ ಬಗ್ಗೆ ಈ ವರೆಗೂ ಹೆಚ್ಚು ಅಧ್ಯಯನಗಳು ಆಗಿರುವುದಿಲ್ಲ. ಬಂಗಾಳಕೊಲ್ಲಿ ಸೇರಿದಂತೆ ಇತರ ಭಾಗದಲ್ಲಿ ಕಂಡುಬರುವ “ಆಲಿವ್ ರಿಟ್ಟಿ” ಜಾತಿಯ ಆಮೆಗಳಂತೆ ಬಹುತೇಕ ಇದರ ಜೀವನಕ್ರಮ ಹೋಲುತ್ತದೆ.
ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಕಳೆದ ಒಂದು ವಾರದ ಹಿಂದೆ ಎರಡು ಆಮೆಗಳ ಕಳೆಬರಹ ಪತ್ತೆಯಾಗಿತ್ತು. ಇದರ ನಂತರ ಇದೀಗ ಮತ್ತೆ ಆಮೆಯ ಕಳೆ ಬರಹ ಕಂಡು ಬಂದಿದೆ. ಅತೀ ಹೆಚ್ಚು ಆಯುಷ್ಯವನ್ನು ಹೊಂದಿರುವ ಆಮೆಗಳು ಹೀಗೇ ಒಂದಾದ ಮೇಲೊಂದರಂತೆ ಸತ್ತು ಕಡಲ ತೀರಗಳಿಗೆ ಬರತೊಡಗಿದೆ. ಹೀಗಾಗಿ ಇವುಗಳ ಸಾವಿನ ಬಗ್ಗೆ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರವಾರದ ಡಿ.ಸಿ.ಎಫ್ ವಸಂತ್ ರೆಡ್ಡಿ ಅವರು ಇದೇ ಮೊದಲ ಬಾರಿಗೆ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಇದರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಇದು ಹೇಗೆ ಸಾವಾಗಿದೆ ಎಂಬುದು ತಿಳಿಯಲಿದೆ ಎಂದು ತಿಳಿಸಿದ್ದಾರೆ.




