ಕೊರೊನಾ ನಿಯಮ ಗಾಳಿಗೆ ತೂರಿ ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ಪ್ರಚಾರ

ಧಾರವಾಡ: ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಚುನಾವಣೆ ಕಾವು ರಂಗು ಜೋರಾಗುತ್ತಿದ್ದು, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಪರ ರಾಜ್ಯ ಮಟ್ಟದ ನಾಯಕರು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿ ಪರ ಇಂದು ಧಾರವಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತಯಾಚನೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ಕೊರೊನಾ ನಿಯಗಳನ್ನು ಗಾಳಿಗೆ ತೂರಿ ಪಾಲಿಕೆ ಚುನಾವಣೆ ಪ್ರಚಾರ ನಡೆಸಿರುವುದು ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಯಿತು.
ಧಾರವಾಡದ ವಾರ್ಡ ನಂಬರ್ 13ರ ಬಿಜೆಪಿ ಅಭ್ಯರ್ಥಿಯಾದ ನಿತೀನ್ ಇಂಡಿ ಪರ ವಾರ್ಡನ್ ಕೆಲಗೇರಿಯಲ್ಲಿ ಕಟೀಲ್ ಪ್ರಚಾರ ನಡೆಸಿದ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ ದಂಡು ಆಗಮಿಸಿತ್ತು. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಹಲವು ಕಾರ್ಯಕರ್ತರು ಭಾಗವಹಿಸಿ ಕೊರೊನಾ ನಿಯಮ ಉಲ್ಲಂಘಿಸಿದರು. ಕಣ್ಮುಂದೇ ಕೋವಿಡ್ -19 ರೂಲ್ಸ್ ಬ್ರೇಕ್ ಆಗುತ್ತಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರು ಮಾತ್ರ ತಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು.
ಮೂರನೇ ಅಲೆಯ ಭೀತಿಯ ನಡುವೆಯೂ ರಾಷ್ಟ್ರೀಯ ಪಕ್ಷದ ನಾಯಕರು ಪಾಲಿಕೆಯ ಚುನಾವಣೆಯ ಪ್ರಚಾರದಲ್ಲಿ ಕೊರೊನಾ ನಿಯಮ ಉಲ್ಲಂಘನೆ ಮಾಡುತ್ತಲೇ ಬರುತ್ತಿದ್ದು, ಧಾರವಾಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಏನು ಕ್ರಮ ಕೈಗೊಳ್ಳುತ್ತಿದೆ ಎಂದು ಅವಳಿ ನಗರಗಳ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.




