ಬಾಗಲಕೋಟೆ

ಕೋವಿಡ್ ಮೂರನೇ ಅಲೆ ಭೀತಿ; ತುಳಸಿಗೇರಿ ಆಂಜನೇಯ ದೇಗುಲಕ್ಕೆ ಭಕ್ತರ ಸಂಖ್ಯೆ ವಿರಳ

ಬಾಗಲಕೋಟೆ: ಮೂರನೇ ಅಲೆ ಭೀತಿ ಇದೀಗ ದೇಗುಲಕ್ಕೂ ತಟ್ಟಿದೆ.ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ತುಳಸಿಗೇರಿ ಆಂಜನೇಯ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಪ್ರತಿ ಶನಿವಾರ ಬಾಗಲಕೋಟೆ, ಬೆಳಗಾವಿ,ವಿಜಯಪುರ ನೆರೆಯ ಜಿಲ್ಲೆಗಳಿಂದಲೂ ಭಕ್ತರು ತುಳಸಿಗೇರಿ ಆಂಜನೇಯ ದೇಗುಲಕ್ಕೆ ದರ್ಶನಕ್ಕೆ ಬರುತ್ತಿದ್ದರು. ಆದರೆ ಮೂರನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ಗಡಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಜೊತೆಗೆ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಭಕ್ತರು ತಿರುಪತಿ ತಿಮ್ಮಪ್ಪನ ರೂಪದಲ್ಲಿ ತುಳಸಿಗೇರಿ ಆಂಜನೇಯ ಆರಾಧನೆ ಮಾಡುತ್ತಾರೆ. ಪ್ರಸಿದ್ಧ ತುಳಸಿಗೇರಿ ಆಂಜನೇಯ ದೇಗುಲ ಸರ್ಕಾರದ ಸುಪರ್ದಿಯಲ್ಲಿದ್ದು, ದೇಗುಲದಲ್ಲಿ ಈಗಾಗಲೇ ಸೇವಾ ಕಾರ್ಯಗಳಿಗೆ ನಿರ್ಬಂಧ ಹೇರಲಾಗಿದೆ. ಕೇವಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಕೆಲ ಭಕ್ತರು ಹೂ, ಕಾಯಿ ಹಣ್ಣು ದೇವರಿಗೆ ಸಮರ್ಪಿಸುತ್ತಿದ್ದು, ದೇಗುಲದ ಹೊರಗೆ ಹೂ, ಹಣ್ಣು, ಕಾಯಿ ಮಾರಾಟ ಮಾಡುವ ವ್ಯಾಪಾರಸ್ಥರು, ಭಕ್ತರು ಬರುವಿಕೆಗಾಗಿ ದಾರಿ ಕಾಯುವಂತಾಗಿದೆ.

ಎರಡನೇ ಅಲೆ ಲಾಕ್ ಡೌನ್ ಸಡಿಲಿಕೆ ಬಳಿಕ ಭಕ್ತರು ದೇಗುಲಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿತ್ತು. ಜೊತೆಗೆ ವ್ಯಾಪಾರಸ್ಥರ ವಹಿವಾಟು ಯಥಾಸ್ಥಿತಿಯತ್ತ ಬರತೊಡಗಿತ್ತು. ಇನ್ನೇನು ವ್ಯಾಪಾರ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಮೂರನೇ ಅಲೆ ಭೀತಿಯಿಂದ ಮತ್ತೆ ವ್ಯಾಪಾರಕ್ಕೆ ಹೊಡೆತ ಬೀಳುವಂತಾಗಿದೆ. ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿ, ತೆಂಗಿನಕಾಯಿ ವ್ಯಾಪಾರ ಕಡಿಮೆ ಆಗಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು. ದೇಗುಲಕ್ಕೆ ಬಂದಿರುವ ಭಕ್ತರು ಮಾಸ್ಕ್, ಸಾಮಾಜಿಕ ಅಂತರ ಮರೆತು ದರ್ಶನ ಪಡೆಯುತ್ತಿರುವುದು ಕೂಡ ಕಂಡುಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button