Latestಬೆಳಗಾವಿರಾಜಕೀಯರಾಜ್ಯ

ಮೂಲೆಗುಂಪಾದ ಬೆಳಗಾವಿ ವಲಸಿಗ ನಾಯಕರು; ಅಳಿವು ಉಳಿವಿನ ಹೋರಾಟದಲ್ಲಿ ಸಾಹುಕಾರ್ ಪಡೆ

ವಿಶೇಷ ವರದಿ: ಮಲ್ಲಿಕ್ ಬೆಳಗಲಿ

ಬೆಳಗಾವಿ: ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಬಿಜೆಪಿ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಳಗಾವಿ ಮಹಾ ದಂಡನಾಯಕನ ಸಮೇತ ಜಿಲ್ಲೆಯ ಮೂವರು ನಾಯಕರು ಈಗ ಆತಂತ್ರರಾಗಿದ್ದಾರೆ. ತಾವು ನೆಚ್ಚಿಕೊಂಡಿದ್ದ ಯುಡಿಯೂರಪ್ಪನವರೇ ಸಿಎಂ ಸ್ಥಾನ ತ್ಯಜಿಸಿದ ಮೇಲೆ ಮತ್ತೆ ಸಚಿವಗಿರಿ ಆಸೆ ಇಟ್ಟುಕೊಂಡಿದ್ದ ನಾಯಕರು ಈಗ ಅಸ್ತಿತ್ವಕ್ಕಾಗಿ ಕಾರ್ಯತಂತ್ರ ಹೆಣೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್, ಮಹೇಶ್ ಕುಮಠಳ್ಳಿ ಸದ್ಯ ಬಿಜೆಪಿ ವಲಯದಲ್ಲಿ ಮೂಲೆಗುಂಪು ಆಗಿರುವುದಂತೂ ಖಾತ್ರಿ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಬಿಜೆಪಿಯಲ್ಲಿ ಕೂಡ ಈ ಮೂವರು ನಾಯಕರಿಗೆ ವಿರೋಧಿ ಗುಂಪು ಕೂಡ ರಚನೆಯಾಗಿತ್ತು. ಇವರ ತಟಸ್ಥ ನೀತಿಯಿಂದಲೇ ಈಗ ಯಾರೊಬ್ಬರೂ ಮಂತ್ರಿಗಿರಿ ಪಡೆಯುತ್ತಿಲ್ಲ ಎನ್ನುವುದು ಕೂಡ ಗುಮಾನಿ. ಹೀಗೆ ಮುಂದುವರೆದರೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕೂಡ ನಮಗೆ ಸೋಲುಂಟಾಗಬಹುದು ಎನ್ನುವ ಭಯ ಈಗ ವಲಸಿಗ ನಾಯಕರನ್ನು ಕಾಡುತ್ತಿದೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಿ ರಿಪೋರ್ಟ್ ನಿರೀಕ್ಷೆಯಲ್ಲಿ ಇದ್ದಾರೆ. ಅದಾದ ನಂತರ ಮಂತ್ರಿಗಿರಿ ಬೇಕು ಎನ್ನುವ ಬೇಡಿಕೆ ಅವರದು. ಆದ್ರೆ ಅಲ್ಲಿಯವರೆಗೆ ಸಹೋದರನಾದ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಗಿರಿ ಪಟ್ಟ ಬೇಕು ಎನ್ನುವ ಡಿಮ್ಯಾಂಡ್ ಈಗ ಕಮರಿಹೋಗಿದ್ದು ಇರುವ ಒಂದು ಅವಕಾಶ ಕೂಡ ಹೊರಟು ಹೋಗಿದೆ. ಇನ್ನು ಸಿಡಿ ಕೇಸ್ ಮುಂದುವರೆದರೆ ರಾಜಕೀಯ ನಿವೃತ್ತಿ ಪಡೆದು ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿಯನ್ನು ತಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸುವ ಯೋಜನೆ ಕೂಡ ಇದ್ದಂತಿದೆ. ಅಲ್ಲಿಯವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಜಾರಕಿಹೊಳಿ ಸಾಹುಕಾರನ ಅಣತಿಯಂತೆ ವಲಸೆ ಬಂದಿದ್ದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಕೂಡ ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದ್ರೆ ಬೊಮ್ಮಾಯಿ ಸರ್ಕಾರ ಇವರನ್ನ ಅರ್ಹ ಎಂದು ಪರಿಗಣಿಸದೆ ಅವಮಾನ ಮಾಡಿದೆ ಎನ್ನುವುದು ಸಾಬೀತು ಆಗಿದೆ. ಹೀಗೆ ಮುಂದುವರೆದರೆ ಪ್ರಬಲರಾಗಿರುವ ಲಕ್ಷ್ಮಣ ಸವದಿ ಮುಂದಿನ ಚುನಾವಣೆಯಲ್ಲಿ ಮಹೇಶ್ ಕುಮಠಳ್ಳಿಗೆ ಕಂಟಕವಾಗಲಿದ್ದಾರೆ. ಹೀಗಾಗಿ ಸಾಹುಕಾರನ ಸಲಹೆಗೆ ಮತ್ತೆ ಬೆನ್ನು ಬಿದ್ದು ಮುಂದಿನ ಚುನಾವಣೆಗೆ ಸನ್ನದ್ಧರಾಗುತ್ತಿದ್ದಾರೆ.

ಇನ್ನು ಶ್ರೀಮಂತ ಪಾಟೀಲ್ ಕಳೆದ ಬಾರಿ ಮಂತ್ರಿಗಿರಿ ಪಡೆದಿದ್ದರೂ ಈ ಬಾರಿ ಅವರನ್ನ ಕೈಬಿಟ್ಟಿದಕ್ಕೆ ತೀವ್ರ ಅಸಮಾಧಾನಗೊಂಡಿದ್ದಾರೆ. ಜಿಲ್ಲೆಯ ಪ್ರಬಲ ಸಮುದಾಯವಾಗಿರುವ ಮರಾಠ ಸಮುದಾಯಕ್ಕೆ ಬೊಮ್ಮಾಯಿ ಸರ್ಕಾರ ಮಾಡಿರುವ ದ್ರೋಹ ಎಂಬಂತೆ ಎಲ್ಲಾ ಕಡೆ ಈಗಾಗಲೇ ಹೇಳಿಕೊಂಡು ಪ್ರತಿಭಟನೆ ಕೂಡ ನಡೆಸಿದ್ದಾರೆ. ಈಗಾಗಲೇ ಲೋಕಸಭಾ ಉಪಚುನಾವಣೆಯಲ್ಲಿ ಮರಾಠ ಸಮುದಾಯ ಬಿಜೆಪಿಯನ್ನು ಬಿಟ್ಟು ಬೇರೆಡೆ ಮತ ಚಲಾವಣೆ ಮಾಡಿತ್ತು. ಈಗ ತಮ್ಮ ಸಮುದಾಯದ ಯಾವೊಬ್ಬ ನಾಯಕನೂ ಮಂತ್ರಿ ಆಗಿಲ್ಲ ಎಂದು ಮತ್ತೆ ಮುನಿಸಿಕೊಂಡಿದ್ದು, ಇದರ ಪರಿಣಾಮ ನೇರವಾಗಿ ಬಿಜೆಪಿಗೆ ಹೊಡೆತ ಕೊಡುವುದರಲ್ಲಿ ಸಂಶಯವಿಲ್ಲ. ತಮಗೆ ವಯಸ್ಸಾದ ಹಿನ್ನೆಲೆಯಲ್ಲಿ ಮುಂದಿನ ಬಾರಿ ಪಕ್ಷ ಟಿಕೆಟ್ ನೀಡದೆ ಇರಬಹುದು ತಮ್ಮ ಕುಟುಂಬಕ್ಕೂ ಟಿಕೆಟ್ ನೀಡದೆ ಹೋದ್ರೆ ತುಂಬಾ ಕಷ್ಟ ಎಂದು ಈಗ ರಾಜಕೀಯ ಕಾರ್ಯತಂತ್ರಕ್ಕೆ ಮೊರೆ ಹೋಗಿದ್ದಾರೆ.

ಇನ್ನೆರಡು ವರ್ಷದಲ್ಲಿ ಸರ್ಕಾರದ ಅವಧಿ ಮುಗಿದು ಹೋಗುತ್ತದೆ. ಆದ್ರೆ ಅಷ್ಟರಲ್ಲಿ ತಮ್ಮ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಚುನಾವಣೆ ಎದುರಿಸುವ ಸವಾಲು ಈಗ ಸರ್ಕಾರ ತಂದ ವಲಸಿಗ ನಾಯಕರ ಮುಂದಿರುವ ದೊಡ್ಡ ಸವಾಲು. ನಂಬಿದ್ದ ಯಡಿಯೂರಪ್ಪನವರ ಶಕ್ತಿ ಮತ್ತಷ್ಟು ಕುಗ್ಗಿದರೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣ ಮಾಡಲು ಹೊರಟ ರಮೇಶ್ ಜಾರಕಿಹೊಳಿ ತಂಡಕ್ಕೆ ಎಲ್ಲಿಲ್ಲದ ತಾಪತ್ರಯ ಗ್ಯಾರಂಟಿ ಎನ್ನಬಹುದು. ಹೀಗಾಗಿ ಎಲ್ಲಾ ಕಡೆ ಪ್ರತಿಭಟನೆ, ಶಕ್ತಿ ಪ್ರದರ್ಶನ.

ಇನ್ನು ಅಸಮಾಧಾನಗೊಂಡಿರುವ ನಾಯಕರು ಈಗಾಗಲೇ ಬೆಂಗಳೂರಿನಲ್ಲಿ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರಿಗೆ ತಮ್ಮ ಮುನಿಸಿನ ಬಗ್ಗೆ ಅರ್ಥ ಮಾಡಿಸುತ್ತಿದ್ದಾರೆ. ಆದರೆ ಇದೆಲ್ಲವೂ ಗೊತ್ತಿದ್ದೂ ಸಮಯ ಕಳೆಯುತ್ತಿರುವ ಬಿಜೆಪಿ ವರಿಷ್ಠರು ಪರೋಕ್ಷವಾಗಿ ವಲಸಿಗರ ದಂಡನಾಯಕನ್ನು ಹಣೆಯುತ್ತಿದ್ದಾರೆಯೇ ಎನ್ನುವ ಸಂಶಯ ಕಾಡುತ್ತಿದೆ. ಬೆಳಗಾವಿ ಜಿಲ್ಲಾ ರಾಜಕೀಯ ಬದಲಾಗಿದ್ದು, ಮುಂದೇನು ಆಗಲಿದೆ ಎಂದು ಕಾದುನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button