
ಎಂ ಹೈದರ್
ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ಏರ್ಪೋರ್ಟ್ನಲ್ಲಿ ವಿಮಾನ ಹೊರಟ ರನ್ವೇಯಲ್ಲಿ ಅಸಹಾಯಕರಾಗಿ ಓಡುತಿದ್ದರು. ವಿಮಾನದ ಚಕ್ರಗಳಲ್ಲಿ ನೇತಾಡಿಕೊಂಡು ಹೋಗಲು ಯತ್ನಿಸಿದ ಮೂರು ಜನ ಮೇಲಿಂದ ಕೆಳಕ್ಕೆ ಬಿದ್ದು ಮೃತಪಟ್ಟರು ಎಂಬ ಸುದ್ದಿಯು ಹೊರ ಜಗತ್ತಿಗೆ ಕಂಡಿದ್ದರಿಂದ ಹಲವರು ಮರುಗಿದರು.
ಆದರೆ ಅಫ್ಘಾನಿಸ್ತಾನದಲ್ಲಿ ಕಳೆದ 19 ವರ್ಷ 9 ತಿಂಗಳು ಅಂದರೆ 7200ಕ್ಕೂ ಅಧಿಕ ದಿನ ಪ್ರತಿದಿನ ಕನಿಷ್ಠ ಎಂದರೂ 25ಕ್ಕೂ ಹೆಚ್ಚು ಹೆಣಗಳು ಉರುಳುತ್ತಿದ್ದವು. ಅಂದರೆ ಇದುವರೆಗೂ 1.80 ಲಕ್ಷ ಜನ ತಾಲಿಬಾನ್ ಗಳು ಸೈನಿಕರು ನಾಗರಿಕರು ಪ್ರಾಣ ತೆತ್ತಿದ್ದಾರೆ. ಅದರಲ್ಲಿ ಬಹಳಷ್ಟು ಬಾರಿ ಅಮಾಯಕ ಮಹಿಳೆಯರು, ಮಕ್ಕಳು ಕೂಡ ಇರುತ್ತಿದ್ದರು. ಅಲ್ಲಿ ಮನುಷ್ಯನ ಪ್ರಾಣಕ್ಕೆ ಕಿಮ್ಮತ್ತು ಇರಲಿಲ್ಲ.ಅಲ್ಲಿ ಅಧಿಕಾರವನ್ನು ಸ್ಥಾಪಿಸುವುದು ಮತ್ತು ಅಧಿಕಾರವನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿತ್ತು.

ಅಮೆರಿಕಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತಾಂಧರ ವಿರುದ್ಧ ಹೋರಾಡಲು ತಾನೇ ಸ್ಥಾಪಿಸಿದ ಅಫ್ಘನ್ ಸೇನೆಯ ಜೊತೆ 19 ವರ್ಷ 9 ತಿಂಗಳುಗಳ ಕಾಲ ಕಾದಾಡಲು ಖರ್ಚು ಮಾಡುತ್ತಿದ್ದಿದ್ದು ಪ್ರತಿದಿನಕ್ಕೆ ಒಂದು ಸಾವಿರ ಕೋಟಿ, ಅಂದರೆ ಸುಮಾರು 80 ಲಕ್ಷ ಕೋಟಿ.
ತಾನೇ ಸ್ಥಾಪಿಸಿದ ತಾಲಿಬಾನ್ ಗಳನ್ನು ಮಟ್ಟ ಹಾಕಲೇಬೇಕೆಂದು ವಿಶ್ವದ ದೊಡ್ಡಣ್ಣ ಎಂದು ಬೀಗುವ ಅಮೇರಿಕಾ ತನ್ನ ಎಲ್ಲ ಶಕ್ತಿ ಬಳಸಿ ಸುದೀರ್ಘವಾಗಿ ಹೋರಾಡಿತು. ಆದರೆ ತಾಲಿಬಾನ್ ಮತಾಂಧರು ಮಾತ್ರ ರಕ್ತಬೀಜಾಸುರರಂತೆ ಕೊಂದಷ್ಟೂ ಹೊರಬರುತ್ತಿದ್ದರು. ಈಗ ಇಪ್ಪತ್ತು ವರ್ಷಗಳಲ್ಲಿ ತಾಲಿಬಾನ್ ಮತಾಂಧರ ಮುಂದೆ ಸೂಪರ್ ಪವರ್ ಎನ್ನುವ ಅಮೆರಿಕಾ ಬಸವಳಿದು ಫಲಾಯನ ಮಾಡಿದ್ದು ನಿಜಕ್ಕೂ ದುರಂತ.
ಖುದ್ದು ಅಮೆರಿಕವೇ ತರಬೇತಿ ನೀಡಿದ 3 ಲಕ್ಷ ಅಫ್ಘನ್ ಸೈನಿಕರು, 80 ಸಾವಿರ ತಾಲಿಬಾನಿಗಳ ಮುಂದೆ ನಿಲ್ಲಲಾಗದೆ ಓಟಕ್ಕಿತ್ತರು. ಅಪ್ಘನ್ ಅಧ್ಯಕ್ಷ ಅಶ್ರಪ್ ಘನಿ ತನ್ನ ಧಣಿ ಅಮೆರಿಕಾ ಕೈಕೊಡುತ್ತಿದ್ದಂತೆ ಇನ್ನೂ ಒಂದು ತಿಂಗಳು ಕಾದಾಡುವ ಸಾಮರ್ಥ್ಯ ಅಫ್ಘನ್ಗೆ ಇದೆ ಎಂದು ಖುದ್ದು ಬೈಡೆನ್ ಹೇಳಿದ್ದರ ಹೊರತಾಗಿಯೂ ಇನ್ನೂ ಒಂದು ತಿಂಗಳು ವ್ಯರ್ಥ ಕಾಲಹರಣ ಮಾಡದೆ ತಾಲಿಬಾನ್ನೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಂತೆ ಹಣದ ಗಂಟುಗಳೊಂದಿಗೆ ಕಾಪ್ಟರ್ನಲ್ಲಿ ಹಾರಿ ತನ್ನ ಧಣಿ ಅಮೇರಿಕ ಮತ್ತು ಅಪ್ಘನ್ ನಾಗರಿಕರಿಗೆ ಆಘಾತ ನೀಡಿದ್ದಾನೆ. ಹೀಗೆ ಅಮೆರಿಕಾ ತನ್ನ ಚಿತಾವಣೆಯಿಂದ ಸ್ಥಾಪಿತವಾದ ಮೂಲಭೂತವಾದಿ ತಾಲಿಬಾನಿಗಳ ಮುಂದೆ ತಾನೇ ಮಂಡಿಯೂರಿದ್ದು ಇತಿಹಾಸದ ವ್ಯಂಗ್ಯ.
ತಾಲಿಬಾನ್ ಮತಾಂಧರ ಕ್ರೌರ್ಯವನ್ನು ಕಳೆದ 25 ವರ್ಷಗಳಿಂದ ಜಗತ್ತು ನೋಡಿದೆ. ಅದು ಯಹೂದಿಗಳಂತೆ ಭಾರತದ ಮನುವಾದಿಗಳಂತೆ ತನ್ನ ವಿಚಾರವನ್ನು ಒಪ್ಪದ ಯಾರನ್ನು ಕೂಡ ಬದುಕಲು ಬಿಡುವುದಿಲ್ಲ. ಹೆಣ್ಣುಮಕ್ಕಳು ಏರಿದ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಹೆಜ್ಜೆಯ ಸಪ್ಪಳ ಕೇಳುವ ಚಪ್ಪಲಿಯನ್ನು ಕೂಡ ಹೆಣ್ಣು ಮಕ್ಕಳು ಧರಿಸುವಂತಿಲ್ಲ. ಆಧುನಿಕ ಶಿಕ್ಷಣ ಪಡೆಯುವಂತಿಲ್ಲ. ಯಾವುದೇ ನೌಕರಿ ಮಾಡುವಂತಿಲ್ಲ. ಈ ಹಿಂದೆ ತಾಲಿಬಾನ್ ಆಳ್ವಿಕೆ ಇದ್ದಾಗ ಉಗುರಿಗೆ ಬಣ್ಣ ಹಚ್ಚಿದ್ದಕ್ಕಾಗಿ ಹೆಣ್ಣು ಮಗಳೊಬ್ಬಳ ಬೆರಳನ್ನು ಕತ್ತರಿಸಿದ ಬಗ್ಗೆ ಸುದ್ದಿಯಾಗತ್ತು. ಹೀಗೆ ಈ ಮೂಲಭೂತವಾದಿ ಮತಾಂಧರ ಮನಸ್ಥಿತಿ ಭೀಕರವಾದದ್ದು. ಅದನ್ನು ಇಷ್ಟು ಸಂಕ್ಷಿಪ್ತವಾಗಿ ಹೇಳಲಾಗದು.
ಅಪಘಾನಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದುಗಳು ಸಿಖ್ಖರು, ಮತ್ತು ತಾಲಿಬಾನ್ ವಿಚಾರವನ್ನು ಒಪ್ಪದ ಮುಸ್ಲಿಮರು ಸೇರಿದಂತೆ ಅಲ್ಲಿನ ನಾಗರಿಕರಲ್ಲಿ ಕಾಣುತ್ತಿರುವ ಭಯ ನೋವು ಆತಂಕವನ್ನು ಬರೆದು ವಿವರಿಸಲಾಗದು. ತಮ್ಮ ಕಣ್ಣ ಮುಂದೇ ಮಕ್ಕಳು ಮಹಿಳೆಯರು ವೃದ್ಧರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ಮನುಷ್ಯ ತಲುಪಿದಾಗ ಏನು ಮಾಡಬೇಕೆಂದು ತೋಚದಾದಾಗ ಅವನ ಮಾನಸಿಕ ಸ್ಥಿತಿಯ ಯಾತನೆಯನ್ನು ಊಹಿಸಲಾಗದು. ಅವರು ತಾಲಿಬಾನ್ ಎಂಬ ಮತಾಂಧರ ಕ್ರೌರ್ಯವನ್ನು ಹತ್ತಿರದಿಂದ ಕಂಡ ಮೇಲೆಯೂ ಅವರು ನಾಗರಿಕರ ಮೇಲೆ ಯಾವುದೇ ರೀತಿಯ ದಾಳಿ ನಡೆಯದು ಎಂಬ ಅವರ ಮಾತನ್ನು ಆ ಅಸಹಾಯಕ ಜನರು ನಂಬಲು ತಯಾರಿಲ್ಲ.
ಭಾರತ ಕಳೆದ ಎಪ್ಪತ್ತು ವರ್ಷಗಳಿಂದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರುವವರಿಗೆ ಅಮೆರಿಕದ ಜೊತೆಗೆ ಸಂಬಂಧ ತಕ್ಕಮಟ್ಟಿಗೆ ಚೆನ್ನಾಗಿತ್ತು. ಆದರೆ ಈಗ ನೆರೆಯ ಚಿಕ್ಕ ಪುಟ್ಟ ರಾಷ್ಟ್ರಗಳು ಸೇರಿದಂತೆ ಅಮೆರಿಕಾದ ಜೊತೆಗೂ ಭಾರತ ಸಂಬಂಧ ಚೆನ್ನಾಗಿಲ್ಲ. “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂಬ ಘೋಷಣೆಯಿಂದ ಪ್ರಾರಂಭವಾಗಿ ಕಾಶ್ಮೀರದ ವಿಷಯದಲ್ಲಿಯೂ ಅಮೆರಿಕ ಭಾರತವನ್ನು ಅನುಮಾನದಿಂದ ನೋಡಲಾರಂಭಿಸಿದೆ.
ಅದಕ್ಕಿಂತಲೂ ಹೆಚ್ಚಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ಥಾಪಿತವಾಗಲು ಪಾಕಿಸ್ತಾನ, ಚೀನಾ, ರಷ್ಯಾಗಳು ತುದಿಗಾಲಲ್ಲಿ ನಿಂತಿವೆ. ಇಂತಹ ಸಂದರ್ಭದಲ್ಲಿ ಭಾರತ ನೆರೆಹೊರೆಯ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಲು ಯತ್ನಿಸಬೇಕಿದೆ ತುರ್ತಾಗಿ ಅಪಘಾನಿಸ್ತಾನಲ್ಲಿ ಸಿಲುಕಿಕೊಂಡಿರುವ ಅಲ್ಪಸಂಖ್ಯಾತ ಹಿಂದುಗಳು, ಸಿಖ್ಖರು ಸೇರಿದಂತೆ ಅಲ್ಲಿನ ಅಸಹಾಯಕ ನಾಗರಿಕರನ್ನು ರಕ್ಷಿಸಲು ಮುಂದಡಿ ಇಡಬೇಕಿದೆ.




