ಮರಗಳಿಗೆ ಕೊಡಲಿ ಇಟ್ಟ ಕಿಡಿಗೇಡಿಗಳು ಯಾರು? ಜಾಹೀರಾತು ಮಾಫಿಯಾಗೆ ಬಲಿಯಾದವಾ ವೃಕ್ಷಗಳು?

ತುಮಕೂರು; ನಗರದ ಬಿ.ಎಚ್ ರಸ್ತೆಯ ಡಿವೈಡರ್ ನಲ್ಲಿ ವೃಕ್ಷಮಿತ್ರ ಸಂಸ್ಥೆಯಿಂದ ನೆಟ್ಟು ಪೋಷಿಸಿದ್ದ ಹತ್ತಾರು ಮರಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ ಘಟನೆ ನಡೆದಿದ್ದು, ಪರಿಸರ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯೂ ಇದೇ ರೀತಿಯಲ್ಲಿ ಬಿ.ಎಚ್ ರಸ್ತೆಯ ಸಿದ್ದಗಂಗಾ ಆಸ್ಪತ್ರೆಯ ಎದುರು ಬೆಳೆದಿದ್ದ ಮರಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದರು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ಅದೇ ಬಿ.ಎಚ್ ರಸ್ತೆಯಲ್ಲಿ ಬೆಳೆದಿದ್ದ ಮರಗಳನ್ನು ಇಂದು ಕಡಿದು ಹಾಕಲಾಗಿದೆ.

ಮರಗಳನ್ನು ಕಡಿದಿರುವ ಬಗ್ಗೆ ಮಾಹಿತಿ ಪಡೆದ ಮಹಾನಗರ ಪಾಲಿಕೆ ಮೇಯರ್ ಕೃಷ್ಣಪ್ಪ, ಆಯುಕ್ತೆ ರೇಣುಕಾ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಂಧಿಸಲು ಆಗ್ರಹ; ಎರಡು ಬಾರಿ ಬಿ.ಎಚ್ ರಸ್ತೆಯಲ್ಲಿ ಮರಗಳನ್ನು ಕಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದರು. ಬಿ.ಎಚ್ ರಸ್ತೆಯ ಡಿವೈಡರ್‌ನಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳಿಗೆ ಅಡ್ಡಿಯಾಗುತ್ತದೆ ಎಂದು ಮರಗಳನ್ನು ಕಡಿಯಲಾಗಿದೆ. ಕೂಡಲೇ ಜಾಹೀರಾತು ಟೆಂಡರ್ ಪಡೆದವರ ವಿರುದ್ಧ ಪ್ರಕರಣ ದಾಖಲಿಸಬೇಕು, ಮರ ಕಡಿದ ಮತ್ತು ಕಡಿಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕನ್ನಡಸೇನೆ ಧನಿಯಾಕುಮಾರ್ ಮತ್ತಿತರರಿದ್ದರು.
