ವೀಕೆಂಡ್, ನೈಟ್ ಕರ್ಫ್ಯೂ ಬಗ್ಗೆ ಬಿಜೆಪಿಯಲ್ಲಿ ಗೊಂದಲ: ಹೆಚ್ ಡಿಕೆ ಟೀಕೆ

ಬೆಂಗಳೂರು: ಕೋವಿಡ್ ಬಗ್ಗೆ ಸರಕಾರ ಉಪೇಕ್ಷೆ ಮಾಡಬಾರದು. ಮಂಗಳವಾರ ಒಂದೇ ದಿನ 41 ಸಾವಿರ ಕೇಸ್ ಬಂದಿದೆ. ಇದು ಎಚ್ಚರಿಕೆಯ ಗಂಟೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಸೋಂಕಿನ ಪ್ರಮಾಣವನ್ನು ತಡೆಯಲೇಬೇಕು. ಜನರ ಪರಿಸ್ಥಿತಿ ಮತ್ತು ಅವರ ಜೀವನ ನೋಡಿಕೊಂಡು ಸರಕಾರ ಕ್ರಮ ವಹಿಸಬೇಕು ಎಂದರು.
ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಬಗ್ಗೆ ಸರಕಾರ ನಡೆಸುವ ಪಕ್ಷದಲ್ಲೇ ಸಹಮತ ಇಲ್ಲ. ಅವರೇ ಗೊಂದಲದಲ್ಲಿ ಇದ್ದರೆ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ? ನೈಟ್ ಕರ್ಫ್ಯೂ ಬಗ್ಗೆ ಬಿಜೆಪಿಯ ಪ್ರಮುಖರೇ ವಿರೋಧ ಮಾಡ್ತಾ ಇದ್ದಾರೆ ಎಂದು ಹೇಳಿದರು.
ಸರಕಾರ ದಾರಿ ತಪ್ಪಿಸುತ್ತಿದೆ
ದೇಶದಲ್ಲಿ ಹಸಿವಿನಿಂದ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರಕಾರ ಕೋರ್ಟ್ ಮುಂದೆ ಬುಧವಾರ ಹೇಳಿದೆ. ಎರಡು ಹೊತ್ತಿನ ಊಟ ಇಲ್ಲದೆ ಸಾಯುವವರು ಇದ್ದಾರೆ. ಜನ ಎಷ್ಟು ಕಷ್ಟದಲ್ಲಿ ಇದ್ದಾರೆ ಎನ್ನುವುದನ್ನು ಸರಕಾರ ನೋಡಬೇಕು. ಸೋಂಕಿನ ಕಾರಣದಿಂದ ಜನ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ನಿಜ ಸ್ಥಿತಿ ಹೀಗಿರುವಾಗ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಕುಮಾರಸ್ವಾಮಿ ಎಂದರು.
ಜನರಿಗೆ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವುದು ಎಲ್ಲ ಸರಕಾರಗಳ ಜವಾಬ್ದಾರಿ. ಸಣ್ಣ ರೈತರಿಗೆ ಮಾರಾಟ ವ್ಯವಸ್ಥೆ, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಬೇಕು. ವಿರೋಧ ಪಕ್ಷಗಳು ಹೇಳುತ್ತವೆ ಎಂದು ಸರಕಾರ ಮಾಡದೇ ಇರಬಾರದು. ಜನರ ಕಷ್ಟಕ್ಕೆ ಮಿಡಿಯದಿದ್ದರೆ ಸರಕಾರ ಇರುವುದು ಏತಕ್ಕೆ ಎಂದು ಅವರು ಪ್ರಶ್ನಿಸಿದರು.
