ಉಕ್ರೇನ್ ನಿಂದ ರೇಷ್ಮೆನಗರ ರಾಮನಗರಕ್ಕೆ ಬಂದಿದ್ದೇಗೆ?

ರಾಮನಗರ: ರಷ್ಯಾ ಹಾಗೂ ಉಕ್ರೇನ್ ನಡುವೆ ಆರಂಭವಾದ ಯುದ್ದದಲ್ಲಿಸಿಲುಕಿಕೊಂಡಿದ್ದ ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿನುತಾ ಹಾಗೂ ಚಂದ್ರಶೇಖರ್ ಅವರ ಪುತ್ರಿ ನಿವೇದಿತಾ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ಈ ವೇಳೆ ಉಕ್ರೇನ್‍ನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡ ನಿವೇದಿತಾ, ಇಂದು ನನ್ನ ಕುಟುಂಬ ಹಾಗೂ ಹುಟ್ಟೂರು ಸೇರಿಕೊಂಡಿದ್ದೇನೆ ಎಂದರೆ ಅದಕ್ಕೆ ಉಕ್ರೇನ್ ಹಾಗೂ ಭಾರತ ಸರ್ಕಾರ ಕಾರಣ. ಈ ಎರಡು ಸರ್ಕಾರಗಳಿಗೆ ಹೃದಯಪೂರ್ವಕವಾಗಿ ನಮಿಸುತ್ತೇನೆ. ಇದರೊಂದಿಗೆ ಉಕ್ರೇನ್‍ನಲ್ಲಿರುವ ಇತರ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಬರಲಿ ಎಂದು ಪ್ರಾರ್ಥಿಸಿದರು.
ವೈದ್ಯೆಯಾಗಬೇಕು ಎಂಬ ಮಹಾದಾಸೆಯಿಂದ ಉಕ್ರೇನ್‍ಗೆ ಹೋಗಿದ್ದೆ. ಇಂತಹ ಸನ್ನಿವೇಶ ಬರುತ್ತದೆ ಎಂಬುದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ಮೆಡಿಕಲ್ ಎರಡನೇ ವರ್ಷದ ಮೂರನೇ ಸೆಮಿಷ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಈ ಮಧ್ಯೆ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುತ್ತದೆ ಎಂಬ ಸುದ್ದಿ ನಮಗೆ ತಲುಪಿತ್ತು. ಆದರೆ, ಆರಂಭದಲ್ಲಿ ಈ ವಿಷಯದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ದಿನಕಳೆದಂತೆ ಯುದ್ಧ ನಿಶ್ಚಯವಾದಾಗ ಸಾಕಷ್ಟು ಭಯ ಆವರಿಸಿತ್ತು. ಮೊದಲು ನನ್ನ ದೇಶಕ್ಕೆ ಹೊರಡಬೇಕು ಎಂಬ ಢವಢವ ಆರಂಭವಾಯಿತು. ಅದರಂತೆ ಸ್ವದೇಶಕ್ಕೆ ಮರಳಲು ಟಿಕೆಟ್ ಸಹ ಬುಕ್ ಮಾಡಿದ್ದೆ. ಉಕ್ರೇನ್‍ನಿಂದ ಜರ್ಮನಿ ಅಲ್ಲಿಂದ ಭಾರತಕ್ಕೆ ಮರಳುವ ಯೋಜನೆ ನಡೆಸಿದ್ದೆ. ಆದರೆ, ಇನ್ನೇನು ಹೊರಡಬೇಕು ಎಂಬ ವೇಳೆಯಲ್ಲಿ ಇದು ಸಾಧ್ಯವಾಗಲಿಲ್ಲ. ನಾವಿದ್ದ ಸ್ಥಳದಲ್ಲಿ ಯುದ್ಧದ ಭೀಕರತೆ ಇರಲಿಲ್ಲವಾದರೂ, ದೇಶಕ್ಕೆ ಮರಳಲು ಸಾಧ್ಯವಾಗದೇ ಕಾರಣಾಂತರದಿಂದ ಅಲ್ಲಿಯೇ ಉಳಿಯಬೇಕಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು.
ನಮ್ಮ ಯೂನಿವರ್ಸಿಟಿಯಲ್ಲಿ1200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ನಾವು ಸ್ವದೇಶಕ್ಕೆ ಹೊರಡಲು ಅವಕಾಶವಿದ್ದ ವಿಮಾನ ನಿಲ್ದಾಣ ದ್ವಂಸವಾಗಿದ್ದು ನಮ್ಮೆಲ್ಲರ ಭಯಕ್ಕೆ ಕಾರಣವಾಗಿತ್ತು. ಅಲ್ಲಿನ ಬಂಕರ್‍ಗಳಲ್ಲಿ ಕೆಲದಿನ ಕಾಲ ಕಳೆದ ನಾವುಗಳು, ಉಕ್ರೇನ್ ಸರ್ಕಾರದ ಸಹಾಯದಿಂದ ನಾಲ್ಕು ದಿನಗಳ ಕಾಲ ರೈಲಿನ ಮೂಲಕ ಪಕ್ಕದ ಹಂಗೇರಿಯಾ ದೇಶ ತಲುಪಿದೆವು. ಅಲ್ಲಿ ಭಾರತ ಸರ್ಕಾರ ನಮಗೆ ವಸತಿ ಹಾಗೂ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿತ್ತು. ಹಂಗೇರಿಯಾ ದೇಶಕ್ಕೆ ಬರುವರೆಗೂ ನಮ್ಮ ಪ್ರಾಣದ ಬಗ್ಗೆ ನಮಗೆ ನಂಬಿಕೆ ಇರಲಿಲ್ಲ. ಇಂದು ನಾನು ಹಾಗೂ ನಮ್ಮ ಸ್ನೇಹಿತರು ಮನೆ ಸೇರಿಕೊಂಡಿದ್ದೇವೆ ಎಂದರೆ ಅದಕ್ಕೆ ಉಕ್ರೇನ್ ಹಾಗೂ ಭಾರತ ಸರ್ಕಾರವೇ ಕಾರಣ ಎಂದು ಶ್ಲಾಘಿಸಿದ್ದಲ್ಲದೆ ಉಕ್ರೇನ್‍ನಲ್ಲಿ ದೇಶದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಭಾರತ ಸರ್ಕಾರ ವಿಫಲವಾಗಿದೆ ಎಂಬ ಮಾತು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಇನ್ನು ಮುದ್ದಿನ ಮಗಳು ಮನೆ ಸೇರಿಕೊಂಡಿರುವುದು ನಿವೇದಿತಾ ಪಾಲಕರಲ್ಲಿ ಸಂಭ್ರಮ ಮುಗಿಲುಮುಟ್ಟುವಂತೆ ಮಾಡಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಅವರ ತಂದೆ ಚಂದ್ರಶೇಖರ್, ಉಕ್ರೇನ್‍ನಲ್ಲಿ ಆರಂಭಗೊಂಡ ಅನೀರಿಕ್ಷಿತ ಬೆಳವಣಿಗೆಗಳು ನಮ್ಮನ್ನು ಆತಂಕಕ್ಕೆ ದೂಡಿತ್ತು. ಇಂದು ನಮ್ಮ ಮಗಳು ಸುರಕ್ಷಿತವಾಗಿ ಮನೆ ಸೇರಿಕೊಂಡಿರುವುದು ಖುಷಿ ತಂದಿದೆ. ನಮ್ಮ ಮಗಳು ಸುರಕ್ಷಿತವಾಗಿ ಮನೆ ತಲುಪಿಸಲು ಕಾರಣವಾದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಉಕ್ರೇನ್ ಸಹಜ ಸ್ಥಿತಿಗೆ ತಲುಪಲಿ ಹಾಗೂ ಅಲ್ಲಿರುವ ನಮ್ಮ ದೇಶದ ಮಕ್ಕಳು ಸುರಕ್ಷಿತವಾಗಿ ದೇಶಕ್ಕೆ ಮರಳಲಿ ಎಂದು ಭಗವಂತನಲ್ಲಿಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
