Breaking NewsLatestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
ಸಾಲದ ಸುಳಿಗೆ ಸಿಲುಕಿ ಬಾಡಿ ಬಿಲ್ಡರ್ ಆತ್ಮಹತ್ಯೆಗೆ ಶರಣು

ಧಾರವಾಡ: ಸಾಲದ ಸುಳಿಗೆ ಸಿಲುಕಿಕೊಂಡು ಬಾಡಿ ಬಿಲ್ಡರ್ ವ್ಯಕ್ತಿಯೊಬ್ಬ ಸಾಲ ತೀರಿಸಲಾಗದೆ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಹೊಸಯಲ್ಲಾಪುರದಲ್ಲಿ ನಡೆದಿದೆ.
ಬಾಡಿ ಬಿಲ್ಡರ್ ಪ್ರಭಾಕರ ಆನಂದಪ್ಪ ಕಬ್ಬಾರ ನೇಣಿಗೆ ಶರಣಾದ ವ್ಯಕ್ತಿ. ಮನೆಯ ಮೇಲ್ಛಾವಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಭಾಕರ್ ಕೆಲವು ದಿನಗಳಿಂದ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಆದರೆ ಈ ಹಿಂದೆ ಇಸ್ಪೀಟ್ ಆಟಕ್ಕೆ ಬಿದ್ದು ಬದುಕನ್ನು ಸಾಲದ ಸುಳಿಗೆ ಸಿಲುಕಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದೀಗ ಸಾಲಗಾರ ಕಾಟಕ್ಕೆ ಬೇಸತ್ತು ಪ್ರಭಾಕರ್ ನೇಣು ಹಾಕಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಇನ್ನು ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಶಹರ ಪೊಲೀಸರು ಭೇಟಿ ನೀಡಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
