Breaking NewsLatestಜಿಲ್ಲಾ ಸುದ್ದಿರಾಜ್ಯರಾಮನಗರವಿಶೇಷಸುದ್ದಿಸ್ಪೆಷಲ್ ಸ್ಟೋರೀಸ್

ಪವಾಡ ಬಸವ ಪಂಚಭೂತಗಳಲ್ಲಿ ಲೀನ: ಕಣ್ಣೀರಿಟ್ಟ ಭಕ್ತ ಸಮೂಹ

ರಾಮನಗರ: ನಡೆದಾಡುವ, ಭಕ್ತರ ಇಷ್ಟ-ಅನಿಷ್ಟಗಳನ್ನು ಪರಿಹರಿಸುವ ದೇವರು ಎಂದೇ ಹೆಸರುವಾಸಿಯಾಗಿದ್ದ ಬೊಂಬೆನಗರಿ ಚನ್ನಪಟ್ಟಣ  ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಪುಣ್ಯಕ್ಷೇತ್ರದ ಪವಾಡ ಪ್ರಸಿದ್ಧ ಬಸವ ಪಂಚಭೂತದಲ್ಲಿ ಲೀನವಾಗಿದೆ. ದೇಗುಲದ ಆವರಣದಲ್ಲಿ ಸಂಪ್ರದಾಯಬದ್ದವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು.

20ರ ವಯೋಮಾನದ ಈ ಪವಾಡ ಬಸವಪ್ಪ ಕೆಲ ದಿನಗಳಿಂದ ಖಾಯಿಲೆಯಿಂದ ಬಳಲುತಿತ್ತು.  ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ನೆಲೆಸಿದ್ದ ಬಸವಪ್ಪ ಸುಮಾರು ಇಪ್ಪತ್ತು ವರ್ಷಗಳಿಂದ ಭಕ್ತರ ಕೋರಿಕೆ, ಕಷ್ಟಗಳನ್ನು ನಿವಾರಣೆ ಮಾಡುತ್ತಿತ್ತು. ತನ್ನ ಪವಾಡಗಳಿಂದ ರಾಜ್ಯದೆಲ್ಲೆಡೆ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಸವನ ಆಶೀರ್ವಾದ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಬರುತ್ತಿದ್ದರು.

ಊರಿನ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಬಸವಪ್ಪ ಮೊದಲಿಗನಾಗಿದ್ದ. ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಪ್ಪ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಇಹಲೋಹ ತ್ಯಜಿಸಿದೆ. ಇಡೀ ವಿಶ್ವದಲ್ಲೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪಿಸಿರುವ ಸ್ಥಳ ಎಂದು ಗೌಡಗೆರೆ ಕ್ಷೇತ್ರ ಹೆಸರುವಾಸಿಯಾಗಿದೆ.

ನ್ಯಾಯ ನೀಡುತ್ತಿದ್ದ ಬಸವ

ಇಲ್ಲಿಗೆ ಆಗಮಿಸುವ ಭಕ್ತರಿಗೆ ಬಸವಣ್ಣ ಒಂದು ನ್ಯಾಯಾಲಯವಿದ್ದಂತೆ. ಯಾವುದಾದರೂ ಕೆಲಸವಾಗಬೇಕಾದರೆ ಇಲ್ಲಿನ ಬಸವನ ಅನುಮತಿ ಕೇಳುತ್ತಾರೆ. ಈ ಬಸವಣ್ಣ ಅಸ್ತು ಎಂದು ತಲೆಯಾಡಿಸಿದರೆ ಅದು ಎಂತಹ ಕಠಿಣ ಕೆಲಸವದರೂ ನಿವಾರಣೆ ಆಗುತ್ತದೆಂಬ ಅಚಲ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಇತ್ತು. ಇದರ ಜೊತೆಗೆ ಇದು ಕುಡುಕರ ಕುಡಿತ ಬಿಡಿಸುವ ಮಾಸ್ಟರ್ ಕೂಡ ಆಗಿತ್ತು. ಇದುವರೆಗೂ ಸಾವಿರಾರು ಜನರ ಕುಡಿತ ಬಿಡಿಸಿ ಮನೆ ಮಂದಿಯ ನೆಮ್ಮದಿ ಕಾಪಾಡಿದೆ. ಇದಲ್ಲದೇ ಯಾವುದೇ ಭೂಮಿ ವ್ಯಾಜ್ಯವಿದ್ದರೂ ಇದೇ ಆ ಸ್ಥಳಕ್ಕೆ ಹೋಗಿ ಆ ಭೂಮಿ ಯಾರಿಗೆ ಸೇರಬೇಕು ಎಂಬ ತೀರ್ಮಾನ ಮಾಡುತ್ತಿತ್ತು. ಆದಲ್ಲದೇ ಹಲವು ದೇವಸ್ಥಾನಗಳ ಜಾಗ ಒತ್ತುವರಿ ಮಾಡಿಕೊಂಡಿರುವವರು ಅವರಾಗಿಯೇ ಆ ಜಾಗ ಬಿಡುವಂತೆ ಮಾಡಿದ ಹಲವು‌ ನಿದರ್ಶನವಿದೆ. 

ರಾಜ್ಯದ ಅನೇಕ ಭಕ್ತರು ತಮ್ಮ ಮನೆಗಳ ಹಾಗೂ ಉದ್ಯಮಗಳ ಪೂಜೆಗಳಿಗೆ ಈ ಬಸವಣನನ್ನ ಕರೆದುಕೊಂಡು ಹೋಗುತ್ತಿದ್ದರು. ಹಾಗೇ ಹೋದ ಊರುಗಳಲ್ಲಿ ಕೆಲವರ ಮನೆಗೆ ತಾನೇ ನೇರವಾಗಿ ಹೋಗಿ ಆ ಮನೆಯ ಜನರಿಗೆ ಆರ್ಶೀವಾದ ಮಾಡಿ ಬರುತ್ತಿತ್ತು. ಇಂತಹ ಬಸವಣ್ಣ ಇನ್ನಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಭಕ್ತರಲ್ಲಿ ದುಃಖ ಮಡುಗಟ್ಟಿದೆ.

ಪವಾಡ ಬಸವಣ್ಣ ಎಂದೆ ಹೆಸರುವಾಸಿ

ಒಮ್ಮೆ ಬೆಂಗಳೂರಿನ ಭಕ್ತನೊಬ್ಬ ತನ್ನ ಆಪಾರ್ಟಮೆಂಟಿನ 18 ನೇ ಮಹಡಿಗೆ ಬಸವಪ್ಪ ಹತ್ತಲು ಸಾದ್ಯವಿಲ್ಲವೆಂದು ನಮ್ಮ ಮನೆಗೆ ಬಂದರೆ ನಾನು ಏನಾದರೂ ಮಾಡುತ್ತೇನೆ ಎಂಬ ಗೇಲಿ ಮಾಡುತ್ತಾನೆ. ಆದರೆ ಈ ಪವಾಡ ಬಸವ ಎಲ್ಲರ ಹುಬ್ಬೇರುವಂತೆ 18 ನೇ ಮಹಡಿಯ ಆತನ ಮನೆಗೆ ತೆರಳಿ ಎಲ್ಲರಿಗೂ ಅಚ್ಚರಿಯಾಗುವಂತೆ ಮಾಡಿತ್ತು. ನಂತರ ಆತ ಬಸವಪ್ಪನ ಕ್ಷಮೆ ಕೋರಿ ಕ್ಷೇತ್ರದ ಅಭಿವೃದ್ದಿಗೆ ಕೈ ಜೋಡಿಸುತ್ತಾನೆ. ಈ ಬಸವ ಯಾರ ಮನೆಗೆ ಭೇಟಿ ಕೊಡುತ್ತೋ ಆ ಮನೆಯ ಕೆಲವು ಸೂಕ್ಷ್ಮ ಗಳನ್ನ ತನ್ನ ಕಾಲು ಕೊಂಬುಗಳ ಮೂಲಕ ತಿಳಿಸುತ್ತಿತ್ತು. ಆದರೆ ಕೆಲವು ಜಟಿಲ ಸಮಸ್ಯೆಗಳು ಆರ್ಥವಾಗದಿದ್ದಾಗ ಆ ಮನೆಯ ಗೋಡೆಗಳ ಮೇಲೆ ಅಲ್ಲಿನ ಸಮಸ್ಯೆಯ ಬಗ್ಗೆ ಬರೆಯುತ್ತಾ ಹೋಗುತ್ತಿತ್ತು. ಇದು ಬಹಳಷ್ಟು ವಿಶೇಷವಾಗಿದ್ದು. ಸಾವಿರಾರು ಭಕ್ತರು ಬಹಳ ಗೌರವಾದರಗಳಿಂದ ಈ ಬಸವಪ್ಪನನ್ನ ಕಾಣುತ್ತಿದ್ದರು. ಇನ್ನು ತಪ್ಪು ಮಾಡಿದವರು ಇದರ ಮುಂದೆ ಬರಲು ಹಿಂದೇಟು ಹಾಕುತ್ತಿದ್ದರು.  ಒಮ್ಮೆ ಆಕಸ್ಮಿಕವಾಗಿ ಇಲ್ಲಿನ ಧರ್ಮದರ್ಶಿ ಮಲ್ಲೇಶ್ ಗುರೂಜಿ ಮಾಡಿದ ಒಂದು ತಪ್ಪಿಗೆ ಭರ್ಜರಿ ಪೆಟ್ಟು ತಿಂದ ಉದಾಹರಣೆ ಇದೆ.

ಬಡವರ ಆಶಾಕಿರಣವಾಗಿದ್ದ ಗೌಡಗೆರೆ ಬಸವ

ಈ ಬಸವಣ್ಣನ ಮತ್ತೊಂದು ಪವಾಡ ಅಂದ್ರೆ ಒಂದು ದಿನ ಕೊಪ್ಪಳ ಜಿಲ್ಲೆಯ ವ್ಯಕ್ತಿಯೊರ್ವ ಈ ಬಸವಣ್ಣ ನಿಗೆ ಕಾಗದ ಬರೆದು ನಮ್ಮ ಕಷ್ಟ ಪರಿಹಾರಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕೂಡಲೆ ಬಸವಣ್ಣ ಚನ್ನಪಟ್ಟಣದಿಂದ ಕೊಪ್ಪಳ‌ ಜಿಲ್ಲೆಗೆ ಹೋಗಿ ಅಲ್ಲಿ‌ ಭಕ್ತನ ಕಷ್ಟವನ್ನ ಕಣ್ಣಾರೆ ನೋಡಿ, ತನ್ನ ಮೈ ಮೇಲೆ ಇದ್ದ ೧.೫೦ ಲಕ್ಷ ರೂ ಹಣವನ್ನ ತಲೆ ಆಡಿಸಿ ಕೆಳಕ್ಕೆ ಬೀಳಿಸಿ ಮನೆ ಕಟ್ಟಿಸಿಕೊಳ್ಳುವಂತೆ ಸಹಾಯ ಮಾಡಿತ್ತು. ಕೂಡಲೇ ಆ ಭಕ್ತ ಬಸವಣ್ಣ ನೀಡಿದ ಹಣದ ಜೊತೆಗೆ ಅಲ್ಪ ಸ್ವಲ್ಪ ಹಣ ಒದಗಿಸಿಕೊಂಡು ತನ್ನದೇ ಆದ ಸ್ಬಂತ ಸೂರನ್ನ ಕಟ್ಟಿಸಿಕೊಂಡಿದ್ದಾನೆ. ಇಂತಹ ಪರೋಪಕಾರಿ ಬಸವಣ್ಣ ಇಂದು ನಮ್ಮನ್ನು ಆಗಲಿರುವುದು ವಿಷಾಧನೀಯ ಸಂಗತಿಯಾಗಿದೆ.

ಶ್ರೀಗಳ ನೇತೃತ್ವದಲ್ಲಿ ಬಸವನ ಅಂತ್ಯಕ್ರಿಯೆ

ಸಂಪ್ರದಾಯಬದ್ದ ಅಂತ್ಯ ಸಂಸ್ಕಾರ

ಬಸವಪ್ಪ ಗೌಡಗೆರೆ ಕ್ಷೇತ್ರದ ಮುಕುಟಮಣಿಯಂತಿದ್ದ. ದೇವಾಲಯದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಹಾಗೂ ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅಂತಿಮ ದರ್ಶನ ಪಡೆಯಲು ಕ್ಷೇತ್ರಕ್ಕೆ ಭಕ್ತರು ಆಗಮಿಸಿದರು. ದೇವಾಲಯದ ಆವರಣದಲ್ಲೇ ಭಕ್ತರ ದರ್ಶನಕ್ಕೆ ಇಡಲಾಗಿತ್ತು. ಇದಕ್ಕೂ ಮೊದಲು ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಸಿದಾಗ ಸಾವಿರಾರು ಭಕ್ತರು ಆಶ್ರುತರ್ಪಣ ಸುರಿಸಿದರು.

ಸಂಪ್ರದಾಯ ಬದ್ದವಾಗಿ ಅಂತ್ಯ ಸಂಸ್ಕಾರ ನಡೆಸಿದ ದೇಗುಲದ ಆಡಳಿತ ಮಂಡಲಿ ನೂರಾರು ಲೀಟರ್ ಹಾಲಿನ ಅಭಿಷೇಕ, ಮೊಸರಿನ ಅಭಿಷೇಕ, ಶ್ರೀಗಂಧದ ಅಭಿಷೇಕ, ಕುಂಕುಮ ಹಾಗೂ ಅರಿಶಿಣದ ಅಭಿಷೇಕ, ಎಳನೀರು ಅಭಿಷೇಕವನ್ನ ಬಸವಪ್ಪನಿಗೆ ನೆರವೇರಿಸಿದರು. ನಂತರ ದೇವಸ್ಥಾನದ ಮುಂಭಾಗವೇ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡು ಬೇವೂರು ಮಠದ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಪೂಜೆ ಮಾಡುವ ಮೂಲಕ ಸಾವಿರಾರು ಭಕ್ತರ ಸಮ್ಮುಖದಲ್ಲಿಯೇ ಪವಾಡ ಪುರುಷ ಬಸವಪ್ಪನ ಅಂತ್ಯ ಸಂಸ್ಕಾರ ನಡೆಯಿತು.

ಒಟ್ಟಿನಲ್ಲಿ ಇಲ್ಲಿನ ಪವಾಡ ಬಸವ ನೊಂದವರ ಪಾಲಿನ ಆಶಾಕಿರಣವಾಗಿದ್ದು. ಲಕ್ಷಾಂತರ ನೊಂದ ಜನರ ಕಣ್ಣೀರು ಒರೆಸಿದೆ. ಇಂದು ಈ ಪವಾಡ ಬಸವಣ್ಣ ಇಲ್ಲ ಎಂಬುದೇ ದುಃಖಕರ ವಿಷಯವಾಗಿದೆ. ಪವಾಡ ಬಸವನ ಆತ್ಮಕ್ಕೆ ಶಾಂತಿ ಸಿಗಲಿ.

Spread the love

Related Articles

Leave a Reply

Your email address will not be published. Required fields are marked *

Back to top button