
ಬೆಳಗಾವಿ : ಹಿಂದೂ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (ಮತಾಂತರ ನಿಷೇಧ ಮಸೂದೆ) ಮಂಡನೆ ವಿಷಯ ಮೇಲ್ಮನೆ ಸದಸ್ಯರ ನಡುವೆ ಹಲವು ನಾಟಕೀಯ ಬೆಳವಣಿಗೆಗೆ ಕಾರಣವಾದ ಪ್ರಸಂಗ ಶುಕ್ರವಾರ ನಡೆದಿದೆ. ಇದರಿಂದ ಬೇಸರಗೊಂಡ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದರು ಎಂದು ಗೊತ್ತಾಗಿದೆ.ಶತಾಯಗತಾಯ ವಿಧಾನಮಂಡಲದ ಪ್ರಸಕ್ತ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಗೆ ಅಂಗೀಕಾರ ಪಡೆಯುವ ಹಠಕ್ಕೆ ಆಡಳಿತರೂಢ ಬಿಜೆಪಿ ಮುಂದಾಗಿತ್ತು. ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿರೋಧದಿಂದಾಗಿ ಅದರ ಆಸೆಗಗೆ ತಣ್ಣೀರು ಎರೆಚುವಂತಾಯಿತು.
ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಾಗಿದ್ದ ಈ ಮಸೂದೆ ಮೇಲ್ಮನೆಯಲ್ಲಿ ಸಕಾಲದಲ್ಲಿ ಮಂಡನೆಯಾಗುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಮೊದಲೇ ಹಾಜರಿದ್ದರು. ಆದರೆ ತಂತ್ರ ಅನುಸರಿಸಿದ ಆಡಳಿತರೂಢ ಬಿಜೆಪಿ ಸದಸ್ಯರು ಸದನಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಬಂದರು.
ಇದು ಕಾಂಗ್ರೆಸ್ ಸದಸ್ಯರ ಅಸಮಾಧಾನ, ಆಕ್ರೋಶ ಮತ್ತು ಪ್ರಬಲ ಆಕ್ಷೇಪಕ್ಕೆ ಕಾರಣವಾಯಿತು. ಮೇಲ್ಮನೆಯಲ್ಲಿ ಪ್ರಸಕ್ತ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲ್ಲ ಎಂದು ಮಾತು ಕೊಟ್ಟ ಸರ್ಕಾರ, ಉಪಾಯದಿಂದ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರಗುಳಿಯುವಂತೆ ಮಾಡಿ ಬಿಲ್ ಪಾಸ್ ಮಾಡಿಕೊಳ್ಳುವ ವಿಫಲ ಯತ್ನ ನಡೆಸಿದೆ ಎಂದು ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ಬರುವವರೆಗೆ ವಿರೋಧ ಪಕ್ಷದವರು ಅವರಿಗಾಗಿ ಕಾಯುತ್ತಾ ಕೂರಬೇಕಾ ? ಬೇಕಾದರೆ ಸದನವನ್ನು ನಾಳೆಗೆ ಮುಂದೂಡಿ ಎಂದು ಸಭಾಪತಿಯ ಬಸವರಾಜ ಹೊರಟ್ಟಿ ಅವರನ್ನು ಒತ್ತಾಯಿಸಿದರು. ಜೆಡಿಎಸ್ ಸದಸ್ಯರೂ ಇದಕ್ಕೆ ದನಿಗೂಡಿಸಿದರು.
ಸದನದಲ್ಲಿ ಈಗ ಆಡಳಿತ ಪಕ್ಷದ ಸದಸ್ಯರ ಸಂಖ್ಯಾ ಕಡಿಮೆ ಇರುವುದರಿಂದ ಕಾಲಾಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರ ಮತ್ತು ಬಿಜೆಪಿ ಸದಸ್ಯರ ವರ್ತನೆ ವಿರುದ್ಧ ತೀವ್ರ ವಾಕ್ಸಮರ ನಡೆಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಕಾವೇರಿದ ವಾತಾವರಣ ಏರ್ಪಟ್ಟು ಗದ್ದಲ,ಗೊಂದಲ ಮತ್ತು ಕೋಲಾಹಲಕ್ಕೆಡೆ ಮಾಡಿಕೊಟ್ಟಿತು. ಪರಿಣಾಮವಾಗಿ ಸಭಾಪತಿ ತೀವ್ರ ಅಸಮಾಧಾನದಿಂದಲೇ ಸದನವನ್ನು ಕೆಲಕಾಲ ಮುಂದೂಡಿದರು.
ನಂತರ ಸಭಾಪತಿ ಕೊಠಡಿಗೆ ಧಾವಿಸಿ ಬಂದ ಕಾಂಗ್ರೆಸ್ ಸದಸ್ಯರು ಅವರ ಧೋರಣೆ ಪ್ರಶ್ನಿಸಿದರು. ಇದರಿಂದ ಗಲಿಬಿಲಿ ಮತ್ತು ಮುಜಗರಕ್ಕೀಡಾದ ಸಭಾಪತಿ ಬಸವರಾಜ ಹೊರಟ್ಟಿ ಆಡಳಿತ ಪಕ್ಷದವರು ತಡವಾಗುತ್ತದೆ ಎಂದು ವಿರೋಧ ಪಕ್ಷದ ಸದಸ್ಯರಿಗೆ ತಿಳಿಸಲಾಗಿದೆ ಎಂಬ ಮಾಹಿತಿ ಮೇರೆಗೆ ತಡವಾಯಿತು ಎಂದು ಸ್ಪಷ್ಟನೆ ನೀಡಿದರೆನ್ನಲಾಗಿದೆ.
ನಾಟಕೀಯವಾಗಿ ನಡೆದ ಈ ಬೆಳವಣಿಗೆಗಳಿಂದ ಬೇಸರಗೊಂಡ ಬಸವರಾಜ ಹೊರಟ್ಟಿ ಅವರು ರಾಜಿನಾಮೆಗೆ ಮುಂದಾಗಿದ್ದರು. ಆದರೆ ವಿರೋಧ ಪಕ್ಷದ ಸದಸ್ಯರೇ ಅವರನ್ನು ಸಮಾಧಾನಪಡಿಸಿ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದರು ಎಂದು ತಿಳಿದು ಬಂದಿದೆ.
