Siddaramaih : ರಾಜ್ಯ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ : ಸಿದ್ದರಾಮಯ್ಯ

ಮೈಸೂರು : ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗ 4 ಲಕ್ಷ 57 ಸಾವಿರ ಕೋಟಿ ರೂ. ಸಾಲ ಮಾಡಿದೆ. ನನ್ನ ಅಧಿಕಾರಾವಧಿಯಲ್ಲಿ 2 ಲಕ್ಷ 15 ಸಾವಿರ ಕೋಟಿ ರೂ. ಸಾಲ ಮಾಡಿದ್ದೆವು. ಮೂರು ವರ್ಷಗಳಲ್ಲಿ ಡಬಲ್ ಸಾಲ ಮಾಡಿದ್ದಾರೆ. ಇವರಿಂದ ಜನಪರ ಬಜೆಟ್ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಹಾಗಾಗಿ, ರಾಜ್ಯ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ಇವರು ಬರೆದುಕೊಟ್ಟದ್ದನ್ನು ಓದುತ್ತಾರೆ ಅಷ್ಟೇ ಎಂದರು.
ಕೇಂದ್ರ ಸರ್ಕಾರವನ್ನು ಕೇಳುವ ಧಮ್ ರಾಜ್ಯದಲ್ಲಿ ಯಾರಿಗೂ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಷೇರು ಅನುದಾನ ಕಡಿಮೆಯಾಗಿದೆ. ಕೇಂದ್ರದ ಯೋಜನೆಗಳಿಗೆ ಶೇ.70ರಷ್ಟು ಅನುದಾನ ಕೊಡುತ್ತಿದ್ದರು. ಈಗ 50-50 ಮಾಡಿದ್ದಾರೆ. ಜಿಎಸ್ಟಿ ಪರಿಹಾರ 20 ಸಾವಿರ ಕೋಟಿ ಬಾಕಿ ಇದೆ. ಏನೂ ಅಭಿವೃದ್ಧಿ ಮಾಡದೇ ಮೋದಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ದೇಶ ಈಗ ದಿವಾಳಿಯಾಗುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರಕ್ಕೆ 135 ಲಕ್ಷ 87 ಸಾವಿರ ಕೋಟಿ ರೂ. ಸಾಲ ಇದೆ. ಈಗ 11 ಲಕ್ಷ 59 ಸಾವಿರ ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದ್ದಾರೆ. ಕೇಂದ್ರ 80 ಲಕ್ಷ ಕೋಟಿ ರೂ. ಬಡ್ಡಿ ಕಟ್ಟುತ್ತಿದೆ. ಇದೇನಾ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಇದೇನಾ ಅಚ್ಛೇ ದಿನ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
