Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಲೈಂಗಿಕ ಪ್ರಕರಣ: ಎಸ್ ಐಟಿ ತನಿಖೆ ಅಂತಿಮ, ರಮೇಶ್ ಜಾರಕಿಹೊಳಿಗೆ ಮತ್ತೆ ಜೈಲೋ, ಖುಲಾಸೆಯೋ?

ಬೆಂಗಳೂರು:  ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ. ಇದರ ನಡುವೆಯೇ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ವರದಿ ಸಲ್ಲಿಸಲು ಎಸ್ ಐಟಿ ಗೆ ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ವಿಭಾಗೀಯ ಪೀಠ ಎಸ್ ಐಟಿಗೆ ಈ ಅನುಮತಿ ನೀಡಿದ್ದು, ಸಕ್ಷಮ ಮ್ಯಾಜಿಸ್ಟ್ರೇಟ್ ಮುಂದೆ ತನಿಖೆಯ ಅಂತಿಮ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈ ಲೈಂಗಿಕ ಪ್ರಕರಣದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದರು. ರಾಜ್ಯ ಹೈಕೋರ್ಟ್ ಅಂತಿಮ ವರದಿ ಸಲ್ಲಿಸಲು ಎಸ್ ಐ ಟಿಗೆ ಅನುಮತಿ ನೀಡಿರುವುದರಿಂದ ಶೀಘ್ರವೇ ಪ್ರಕರಣದ  ಭವಿಷ್ಯ ತೀರ್ಮಾನವಾಗಲಿದೆ.

ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ತನಿಖೆಯ ಅಂತಿಮ ವರದಿ ಸಲ್ಲಿಸಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದೆ. ಇದಕ್ಕೂ ಮೊದಲು ಎಸ್ ಐ ಟಿ ಪರ ವಕೀಲರಾದ ಅಶೋಕ್ ಹಾರನಹಳ್ಳಿ ತಮ್ಮ ವಾದ ಮಂಡಿಸಿ, ಯುವತಿ ನೀಡಿದ್ದ ದೂರಿನ ತನಿಖೆ ಈಗಾಗಲೇ ಮುಗಿದಿದೆ. ಹೀಗಾಗಿ ಅಂತಿಮ ವರದಿ ಸಲ್ಲಿಕೆಗೆ ಅನುಮತಿ ನೀಡುವಂತೆ ನ್ಯಾಯಾಲಯನ್ನು ಕೋರಿದ್ದರು.

ಇದಕ್ಕೆ ತಕರಾರು ಎತ್ತಿದ ಯುವತಿ ಪರ ಹಿರಿಯ ವಕೀಲರು ಪೊಲೀಸರಿಗೆ ಎಸ್ ಐ ಟಿ ರಚಿಸುವ ಅಧಿಕಾರ ಇಲ್ಲ. ಹೀಗಾಗಿ ಅದರ ಅಂತಿಮ ವರದಿಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದ್ದರು. ಎರಡೂ ವಾದಗಳನ್ನು ಆಲಿಸಿದ ಕೋರ್ಟ್ ಅಂತಿಮವಾಗಿ ಎಸ್ ಐಟಿ ವರದಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯಕ್ಕೀಡಾದರು ಎನ್ನಲಾದ ಯುವತಿಯ ಆರೋಪಗಳು ಸಾಬೀತಾಗದಿದ್ದರೆ ನ್ಯಾಯಾಲಯಕ್ಕೆ ಬಿ.ರಿಪೋರ್ಟ್ ಸಲ್ಲಿಕೆಯಾಗುತ್ತದೆ. ಸಿ ರಿಪೋರ್ಟ್ ಸಲ್ಲಿಸಿದರೆ ಆರೋಪಿ ಸ್ಥಾನದಲ್ಲಿರುವ ಶಾಸಕ ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗುತ್ತಾರೆ. ಒಂದು ವೇಳೆ, ಚಾರ್ಜ್ ಶೀಟ್ ಸಲ್ಲಿಸಿದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button