
ತೆಲುಗು ಸಿನಿ ಅಂಗಳದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ನಟ ಪ್ರಿನ್ಸ್ ಮಹೇಶ್ ಬಾಬು ನಟನೆಯ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಈಗಾಗ್ಲೆ ನಿರ್ದೇಶಕ ತ್ರಿವಿಕ್ರಮ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಮಹೇಶ್ ಬಾಬು ಇದೀಗ ಮೂರನೇ ಬಾರಿಗೆ ಒಂದಾಗ್ತಿದ್ದಾರೆ.
ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಇದು ಮಹೇಶ್ ಬಾಬು ನಟನೆಯ 28ನೇ ಸಿನಿಮಾ ಆಗಿರೋದ್ರಿಂದ ಚಿತ್ರಕ್ಕೆ #SSMB28 ಎಂದು ಕರೆಯಲಾಗುತ್ತಿದೆ. ಇಂದು ಮುಂಜಾನೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆದಿದೆ.
ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್ ಚಿತ್ರಕ್ಕೆ ಆರಂಭ ಫಲಕ ತೋರಿಸುವ ಮೂಲಕ #SSMB28ಗೆ ಚಾಲನೆ ನೀಡಿದರು. ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ತಿದ್ದು ಈ ಹಿಂದೆ ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ಮಹರ್ಷಿ ಸಿನಿಮಾದಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದರು.
SSMB28 ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ನ 3ನೇ ಸಿನಿಮಾ. ಈ ಹಿಂದೆ ಈ ಜೋಡಿಗಳು ಒಟ್ಟಿಗೆ ಅಥಾಡು ಹಾಗೂ ಖಲೇಜಾ ಚಿತ್ರವನ್ನ ಮಾಡಿದ್ದು ಇದೀಗ ಮೂರನೇ ಬಾರಿಗೆ ಒಂದಾಗ್ತಿದ್ದಾರೆ. #SSMB28 ಸಿನಿಮಾದ ಶೂಟಿಂಗ್ ಏಪ್ರಿಲ್ ತಿಂಗಳಿಂದ ಆರಂಭವಾಗಲಿದ್ದು ಮುಂದಿನ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ತೆರೆಗೆ ಬರಲಿದೆಯಂತೆ.



