ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್ಪಿನ್ ಆರ್.ಡಿ. ಪಾಟೀಲ್ ಬಂಧನ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ನನ್ನ ಸಿಐಡಿ ವಶಕ್ಕೆ ಪಡೆದಿದೆ. ಪಕ್ಕದ ಮಹಾರಾಷ್ಟ್ರದ ಸೋಲಾಪುರದಲ್ಲಿ ಆರ್. ಡಿ ಪಾಟೀಲ್ ಇರೋದನ್ನು ಪತ್ತೆ ಮಾಡಿದ ಸಿಐಡಿ ಅಲ್ಲಿಗೆ ತೆರಳಿ ವಶಕ್ಕೆ ಪಡೆದು, ಕಲಬುರಗಿಗೆ ಕರೆತರುತ್ತಿದ್ದಾರೆ.
ಆರ್.ಡಿ. ಪಾಟೀಲ್ ಸಹೋದರ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ನನ್ನು ನಿನ್ನೆ ಬಂಧಿಸಲಾಗಿದೆ. ಈ ವೇಳೆ ಸಹೋದರ ಮಹಾಂತೇಶ್ ಗೆ ಕರೆ ಮಾಡಿದ ಕಿಂಗ್ಪಿನ್ ಆರ್.ಡಿ ಪಾಟೀಲ್ನ ಲೋಕೇಷನ್ ಟ್ರೇಸ್ ಮಾಡಿದ ಸಿಐಡಿ ಮಹಾರಾಷ್ಟ್ರದ ಸೋಲಾಪುರ ಬಳಿ ಇರೋದು ಪತ್ತೆ ಮಾಡಿದರು. ಈತನ ಬಂಧನಕ್ಕೆ ನಿನ್ನೆಯೇ ಸಿಐಡಿ ತಂಡ ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿತ್ತು. ಇಂದು ಬಂಧಿಸಿ ಕರೆ ತರುತ್ತಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ಕಿಂಗ್ಪಿನ್ ಪಾಟೀಲ್ ಸಹೋದರರ ನೇತೃತ್ವದಲ್ಲಿ ಇಂದು ಅಫಜಲಪುರ ಪಟ್ಟಣದಲ್ಲಿ 101 ಜೋಡಿಯ ಸಾಮೂಹಿಕ ವಿವಾಹ ಆಯೋಜನೆ ಮಾಡಲಾಗಿತ್ತು. ಆರ್.ಡಿ. ಪಾಟೀಲ್ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬಹುದೆಂದು ಇಲ್ಲಿಯೂ ಸಿಐಡಿ ಕಣ್ಗಾವಲು ಇಟ್ಟಿತ್ತು.
ಇನ್ನೂ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಮಹಾಂತೇಶ ಪಾಟೀಲ್ ನನ್ನು ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ಇಂದು ಹಾಜರು ಪಡಿಸಿದ್ದಾರೆ. ಮಹಾಂತೇಶ ಹಾಗೂ ಆರ್.ಡಿ.ಪಾಟೀಲ್ ಸಹೋದರರು ಪಿಎಸ್ಐ ಅಭ್ಯರ್ಥಿಗಳಿಗೆ ಬ್ಯೂಟೂತ್ ಡಿವೈಸ್ ಮೂಲಕ ಅಕ್ರಮ ಪರೀಕ್ಷೆ ಬರೆಸಿದ್ದರು ಎಂಬ ಆರೋಪವಿದೆ. ಪಿಎಸ್ಐ ಅಕ್ರಮದಲ್ಲಿ ಇಲ್ಲಿವರೆಗೆ ಒಟ್ಟು 14 ಜನರ ಬಂಧನವಾದಂತಾಗಿದೆ.
