ಬಿಜೆಪಿ ಬಿ ಟೀಮ್ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ: ಸಿದ್ದರಾಮಯ್ಯ ಲೇವಡಿ

ದಾವಣಗೆರೆ: ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಬಿಜೆಪಿ ಬಿ ಟೀಮ್. ಹೀಗಾಗಿ ನಾನು ಅವರ ಬಗ್ಗೆ ಮಾತಾಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಈ ಹಿಂದೆ ಬಿಜೆಪಿ ಜೊತೆ ಸರ್ಕಾರ ಮಾಡಿದವರು. ಕುಮಾರಸ್ವಾಮಿಯನ್ನ ನಾವಾಗಿಯೇ ಸಿಎಂ ಮಾಡಿದ್ದು.
37 ಸೀಟ್ ಬಂದರೂ ನಾವೇ ಕರೆದು ಸಿಎಂ ಮಾಡಿದ್ದೆವು. ಆದರೆ ಅವರು ಬಿಜೆಪಿ ಜೊತೆಗೆ ಹೋಗಿದ್ದರು. ಹೀಗಾಗಿ ಕುಮಾರಸ್ವಾಮಿ ಬಿಜೆಪಿ ಬಿ ಟೀಮ್ ಎಂದು ಟೀಕಿಸಿದರು. ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಆಗುವುದಿಲ್ಲ. ನಮಗೂ ಸಹ ರಾಹುಲ್ ಗಾಂಧಿ 150 ಸ್ಥಾನ ಗೆಲ್ಲಲೇ ಬೇಕು ಎಂದಿದ್ದಾರೆ. ಹುಬ್ಬಳ್ಳಿ ಗಲಭೆಗೆ ಬಿಜೆಪಿಯವರೇ ಕಾರಣ. ಪೋಸ್ಟ್ ಹಾಕಿದ್ದ ಅಭಿಷೇಕ್ ಹಿರೇಮಠ ಯಾರು? ಸರ್ಕಾರ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು ಎಂದರು.
ಕಾಂಗ್ರೆಸ್ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಹೈಕಮಾಂಡ್ ಹಾಗೂ ಶಾಸಕರು ನಿರ್ಧಾರ ಮಾಡುತ್ತಾರೆ. 6 ತಿಂಗಳ ಮೊದಲೇ ಟಿಕೆಟ್ ಘೋಷಣೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಉತ್ತರ ಪ್ರದೇಶದಂತೆ ಬುಲ್ಡೋಜರ್ ವ್ಯವಸ್ಥೆ ತರಬೇಕೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀರಾಮ ಸೇನೆ ಮೇಲೆ ಬುಲ್ಡೋಜರ್ ಹರಿಸಬೇಕು ಎಂದು ಕಿಡಿಕಾರಿದರು.
ನಾನು ಚುನಾವಣೆ ಮುಗಿಯುವವರೆಗೂ ವಿಶ್ರಾಂತಿಸುವುದಿಲ್ಲ ಎಂಬ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕೇಸ್ ಗಳು ಇರುವ ಕಾರಣ ಅವರು ವಿಶ್ರಾಂತಿ ಪಡೆಯುವುದಿಲ್ಲ. ಸಿಎಂ ಸ್ಥಾನದಿಂದ ಕಿತ್ತು ಹಾಕಿದ್ದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
