ಸಿಐಡಿಯಿಂದ ಸಹೋದರರ ಅರೆಸ್ಟ್: ನಿರ್ವಿಘ್ನವಾಗಿ ನೆರವೇರಿದ ಸಾಮೂಹಿಕ ವಿವಾಹ!

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪದಡಿ ಬಂಧಿತರಾದ ಮಹಾಂತೇಶ ಹಾಗೂ ರುದ್ರೇಗೌಡ ಪಾಟೀಲ್ ಸಹೋದರರು ಆಯೋಜಿಸಿದ್ದ ಸಾಮೂಹಿಕ ವಿವಾಹ ಇಂದು ನಿರ್ವಿಘ್ನವಾಗಿ ನೆರವೇರಿತು. ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ 101 ಜನರ ಸಾಮೂಹಿಕ ವಿವಾಹ ನಡೆಸಲು ಪಾಟೀಲ್ ಸಹೋದರರು ಸಿದ್ದತೆ ಮಾಡಿಕೊಂಡಿದ್ದರು.
101 ಜೋಡಿಯ ಸಾಮೂಹಿಕ ವಿವಾಹದಲ್ಲಿ 57 ಜೋಡಿ ಮದುವೆಗೆ ರಿಜಿಸ್ಟರ್ ಮಾಡಿಕೊಂಡಿದ್ದರು. ಪೂರ್ವ ನಿಗದಿಯಂತೆ ಇಂದು ಮದುವೆ ಏರ್ಪಡಿಸಲಾಗಿತ್ತು. ಈ ನಡುವೆ ನಿನ್ನೆ ಮಹಾಂತೇಶ ಪಾಟೀಲ್ ಹಾಗೂ ಇಂದು ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿದ್ದ ಆರ್.ಡಿ. ಪಾಟೀಲ್ ಇಬ್ಬರು ಸಹೋದರರನ್ನು ಸಿಐಡಿ ಬಂಧಿಸಿದೆ. ಸಹೋದರರ ಅನುಪಸ್ಥಿತಿಯಲ್ಲಿಯೂ ಪೂರ್ವ ನಿಗದಿಯಂತೆ ಮದುವೆ ನಿರ್ವಿಘ್ನವಾಗಿ ಪಾಟೀಲ್ ಕುಟುಂಬ ನೆರವೇರಿಸಿದೆ.
ಬಂಧಿತ ಇಬ್ಬರು ಸಹೋದರರು ಬಿಟ್ಟರೆ ಉಳಿದ ಕುಟುಂಬ ಸದಸ್ಯರು ಎದುರು ನಿಂತು ಮದುವೆಯ ಕಾರ್ಯ ನೆರವೇರಿಸಿದ್ದಾರೆ. ಆರ್.ಡಿ. ಪಾಟೀಲ್ ತಾಯಿ ಭಾರತ್‌ಬಾಯಿ ಪಾಟೀಲ್ ನೇತೃತ್ವದಲ್ಲಿ ನಡೆದ ಮದುವೆಗೆ ಅನೇಕ ಹರ-ಗುರು-ಚರ ಮೂರ್ತಿಗಳು ಸಾನಿಧ್ಯ ವಹಿಸಿದ್ದಾರೆ. ಅಫಜಲಪುರ ಶಾಸಕ ಎಮ್.ವೈ.ಪಾಟೀಲ್ ಸೇರಿ ಅನೇಕ ಗಣ್ಯರು ನವ ಜೋಡಿಗೆ ಶುಭ ಹಾರೈಸಿದರು.
