ಪೌರ ಕಾರ್ಮಿಕರ ಪ್ರತಿಭಟನೆ: ವೇತನ, ಉಪಹಾರ ಭತ್ಯೆಗಾಗಿ ಹೋರಾಟ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 738 ಪೌರ ಕಾರ್ಮಿಕರಿಗೆ ನೇರ ವೇತನ ಹಾಗೂ 134 ಪೌರ ಕಾರ್ಮಿಕರ ವಿವಿಧ ಹುದ್ದೆ ನೇಮಕಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ, ಹುಬ್ಬಳ್ಳಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ನಗರದ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪೌರಕಾರ್ಮಿಕರಾಗಿರೋ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಪಾಲಿಕೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹು-ಧಾ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಹೋರಾಟದ ಮೂಲಕವೇ ನೇರ ವೇತನ ಪಡೆಯಲಾಗಿದೆ. ಆದರೆ ಇನ್ನೂ 738 ಪೌರ ಕರ್ಮಿಕರಿಗೆ ನೇರ ವೇತನವಾಗಿಲ್ಲ, ಜೊತೆಗೆ ಪೌರ ಕಾರ್ಮಿಕರ ಬೆಳಗಿನ ಉಪಹಾರ ಭತ್ಯೆಯನ್ನು ಕಳೆದ 9 ತಿಂಗಳಿಂದ ನೀಡುತ್ತಿಲ್ಲ. ಇದರ ಜೊತೆಗೆ ಪಾಲಿಕೆಯಲ್ಲಿ 134 ವಿವಿಧ ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇದ್ದರೂ ಪಾಲಿಕೆಯ ಅಧಿಕಾರಿಗಳು ನೇಮಕಾತಿ ಮಾಡುತ್ತಿಲ್ಲ. ಹಾಗಾಗಿ ಇಂದು ನಾವು ಅನಿವಾರ್ಯವಾಗಿ ಪ್ರತಿಭಟನೆ ಮಾಡಬೇಕಾಗಿದೆ. ನಮ್ಮ ಪ್ರಮುಖ ಮೂರು ಬೇಡಿಕೆಗಳ ಜೊತೆಗೆ ಇನ್ನುಳಿದ ಬೇಡಿಕೆಗಳನ್ನು ಪಾಲಿಕೆಯ ಅಧಿಕಾರಿಗಳು ಈಡೇರಿಸಬೇಕು ಎಂದು ಅಗ್ರಹಿಸಿದರು.
ಮಹಾನಗರ ಪಾಲಿಕೆಯ ಅಧಿಕಾರಿಗಳು ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
