Breaking NewsLatestಕಲಬುರ್ಗಿಜಿಲ್ಲಾ ಸುದ್ದಿ

ಬೇಸಿಗೆ ಆರಂಭ; ಮಡಿಕೆಗೆ ಬಂತು ಫುಲ್ ಡಿಮ್ಯಾಂಡ್

ಕಲಬುರಗಿ: ಬೇಸಿಗೆ ಆರಂಭವಾಗುತ್ತಿದಂತೆ ಜಿಲ್ಲೆಯಲ್ಲಿ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ನಗರದ ಶರಣಬಸವೇಶ್ವರ ದೇವಸ್ಥಾನದ ಎದುರು ಮಡಿಕೆ ವ್ಯಾಪಾರ ಜೋರಾಗಿ ಸಾಗಿದೆ. ಆಧುನಿಕ ಶೈಲಿಯ ಮಡಿಕೆಗಳಿಗೆ ದೇಸಿ ಟಚ್ ಕೊಟ್ಟು ಮಾರಾಟಕ್ಕೆ ಇಡಲಾಗಿದೆ.

ಕಲಬುರಗಿಯಲ್ಲಿ ಬೇಸಿಗೆಯಲ್ಲಂತೂ ಇಲ್ಲಿ 40 ಡಿಗ್ರಿ ಸೆಲ್ಸಿಯಸ್​ ದಾಟಿ ತಾಪಮಾನ ದಾಖಲಾಗುತ್ತದೆ. ಹೀಗಾಗಿ ಕಲಬುರಗಿ ಜನ ಬೇಸಿಗೆ ತಾಪಕ್ಕೆ ಬಸವಳಿದು ಮಣ್ಣಿನ ಮಡಿಕೆಯ ಮೊರೆ ಹೋಗಿದ್ದಾರೆ.

ಆಕರ್ಷಕ ಮಡಿಕೆಗಳ ಮಾರಾಟ: 

ನಗರದ ಶರಣಬಸವೇಶ್ವರ ದೇವಸ್ಥಾನದ ಎದುರು ಆಕರ್ಷಕ ಮಡಿಕೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಕಲಬುರಗಿ ನಗರ ಸೇರಿದಂತೆ ಸುತ್ತಿಲಿನ ಹಳ್ಳಿ ಜನರು ಇಲ್ಲಿಗೆ ಆಗಮಿಸಿ ಮಡಿಕೆ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಈ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಮಡಿಕೆ ವ್ಯಾಪಾರ ಕುಂಬಾರರ ಕೈ ಹಿಡಿದಿದೆ. ಆದರೆ, ಮಡಿಕೆ ತಯಾರಿಸಲು ಕುಂಬಾರರಿಗೆ ಮಣ್ಣಿನ ಕೊರತೆಯಿದೆ. ಬೇರೆ ಕಡೆಯಿಂದ ಮಣ್ಣಿನ ಮಡಿಕೆ ಹಾಗೂ ಮಣ್ಣಿನಿಂದ ತಯಾರಾದ ಅಡಿಗೆ ಪಾತ್ರೆಗಳನ್ನು ತಂದು ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೋವಿಡ್​ ಹಿನ್ನೆಲೆ ಉಂಟಾದ ಪರಿಣಾಮದಿಂದ ನಾವು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕಿದೆ ಎಂದು ಕುಂಬಾರರು, ಮಡಿಕೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ವ್ಯಾಪಾರ ಹೆಚ್ಚಾಗುವ ಸಾಧ್ಯತೆ:

ಗುಜರಾತ್ ಹಾಗೂ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಆಕರ್ಷಕ ಮಣ್ಣಿನ ಮಡಿಕೆಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ವಾಟರ್ ಬಾಟಲ್, ಮಣ್ಣಿನಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಸಹ ಮಾರಾಟಕ್ಕೆ ಇಟ್ಟಿದ್ದಾರೆ. ಗಾತ್ರದ ಆಧಾರದ ಮೇಲೆ ರೂ. 120 ರಿಂದ 450 ರವರೆಗೆ ಮಣ್ಣಿನ ಮಡಿಕೆಗಳಿಗೆ ದರ ನಿಗದಿ ಮಾಡಲಾಗಿದೆ. ಸದ್ಯ ದಿನಕ್ಕೆ ಹತ್ತರಿಂದ ಇಪ್ಪತ್ತು ಮಡಿಕೆಗಳು ಮಾರಾಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಸಿಲು ಹೆಚ್ಚಾದಂತೆ ಹೆಚ್ಚಿನ ವ್ಯಾಪಾರವಾಗುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ ಎರಡು ವರ್ಷ ಕೊರೊನಾ ಕರಿನೆರಳಿನಿಂದ ಕಂಗಾಲಾಗಿದ್ದ ವ್ಯಾಪಾರಸ್ಥರು, ಈ ಬಾರಿ ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲೂರು ಕಲಬುರಗಿಯಲ್ಲಿ ಮಡಿಕೆ ವ್ಯಾಪಾರ ಗರಿಗೆದರಿದ್ದು, ಕುಂಬಾರರ ಮೊಗದಲ್ಲಿ ಮಂದಹಾಸ ಮೂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button