Breaking NewsLatestಜಿಲ್ಲಾ ಸುದ್ದಿರಾಜಕೀಯರಾಜ್ಯರಾಮನಗರಸುದ್ದಿ

ರಾಜಕೀಯ ದಿಗ್ಗಜರ ಟಾಕ್ ಫೈಟ್: ಮಾಜಿ ಸಿಎಂ ಕುಮಾರಣ್ಣನಿಗೆ ಯೋಗಣ್ಣನ ಟಾಂಗ್!

ರಾಮನಗರ:  ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ಕಳೆದ 20 ವರ್ಷಗಳಿಂದ ತಾಲ್ಲೂಕಿನ ಶಾಸಕನಾಗಿ ಸಚಿವನಾಗಿ ನನ್ನ ಇತಿಮಿತಿಯಲ್ಲಿ ತಾಲ್ಲೂಕಿನ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಆತ್ಮ ತೃಪ್ತಿಯಿದೆ, ನನ್ನ ಕೆಲಸಕ್ಕೆ ಬೇರೆ ಯಾರಿಂದಲೂ ಸರ್ಟಿಫೀಕೇಟ್ ಪಡೆಯುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು. ಅಧಿಕಾರವಿದ್ದಾಗ ತಾಲ್ಲೂಕಿನ ಅಭಿವೃದ್ದಿಯತ್ತ ಗಮನಹರಿಸದೆ, ಅಧಿಕಾರ ಹೋದ ಮೇಲೆ ಇನ್ನೊಬ್ಬರ ಮೇಲೆ ಮನಬಂದಂತೆ ವೃತ ಆರೋಪ ಮಾಡುವ ಕುಮಾರಸ್ವಾಮಿಯವರೇ ನಾನು ಅಭಿವೃದ್ದಿ ಮಾಡಿದ್ದೇನೆಂದು ತಾಲ್ಲೂಕಿಗೆ ಸ್ಕೋಪ್ ತೆಗೆದುಕೊಳ್ಳಲು ಬರುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.

ನಾನು ಸಾರ್ವಜನಿಕ ಬದುಕಿನಲ್ಲಿ ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ, ಸೋಲು ಗೆಲುವುಗಳೆರಡನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ಅಧಿಕಾರ ಇರಲಿ ಇಲ್ಲದಿರಲಿ ಸಾರ್ವಜನಿಕ  ಸೇವೆಯನ್ನು ಸದಾ ಕಾಲ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಇದನ್ನು ಸ್ಕೋಪ್ ಎನ್ನುವುದಾದರೆ, ತಾವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು. ತಾಲ್ಲೂಕಿನ ಜನತೆ ಮುಂದಿನ ದಿನಗಳಲ್ಲಿ ನಿಮ್ಮ ಹೇಳಿಕೆಗಳಿಗೆ ತಕ್ಕ ಪಾಠವನ್ನು ಕಲಿಸುವ ಕಾಲ ದೂರವಿಲ್ಲ. ಅಧಿಕಾರ ಬೇಕೆಂದೆನಿಸಿದಾಗ ಯಾರ ಜೊತೆಗಾದರೂ ಸರಿಯೇ ಪಲಾಯನ ಮಾಡುವ ನೀವು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಕುತಂತ್ರದಿಂದ ನನ್ನನ್ನು ಸೋಲಿಸಿದ ಮಾತ್ರಕ್ಕೆ ಈ ತಾಲ್ಲೂಕಿನ ಜನ ಒಪ್ಪಿಕೊಂಡಿದ್ದಾರೆಂಬ ಭ್ರಮೆಯಲ್ಲಿದ್ದಾರೆ, ಮುಂದಿನ ಚುನಾವಣೆಯ ಫಲಿತಾಂಶ ಸರಿಯಾದ ಉತ್ತರ ನೀಡಲಿದೆ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಚನ್ನಪಟ್ಟಣ ತಾಲ್ಲೂಕು ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆಂದು ನಂಬಿ ನಿಮ್ಮನ್ನು ಆಯ್ಕೆ ಮಾಡಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರುಗಳೇ ಇದೀಗ ಜೆಡಿಎಸ್ ಪಕ್ಷವನ್ನು ತೊರೆದು ಪ್ರತಿದಿನ ಅವರ ಗುಣಗಾನ ಮಾಡುತ್ತಿರುವುದನ್ನು ಕಂಡು ಹತಾಶರಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ಮೇಲೆ ಸುಮ್ಮನೆ ಆರೋಪ ಮಾಡುವುದನ್ನು ಅವರು ಬಿಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ಗುಣಗಾನವನ್ನು ಮಾಧ್ಯಮಗಳೆದರು ಮಾಡಬೇಕಾಗುತ್ತೇ ಎಂದು ಎಚ್ಚರಿಸಿದರು.

ಇನ್ನು ಖಾಸಗಿ ಬಸ್ ನಿಲ್ದಾಣ ವಿಚಾರವಾಗಿಯೂ ಗುಡುಗಿದ ಸಿಪಿವೈ ತಮ್ಮ ಅಧಿಕಾರವಧಿಯಲ್ಲಿ ಪೂರ್ಣ ಮಾಡ್ತೀನಿ ಅಂತ ಭರವಸೆ ಕೊಟ್ಟು ಆಗದೆ ಇದ್ದಾಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು. ಹಾಗೊಂದು ವೇಳೆ ನನ್ನ ಮೇಲೆ ಆರೋಪ ಮಾಡಲೇ ಬೇಕೆಂದಾದರೆ ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬರಲಿ, ನಾನೂ ಬರಲು ಸಿದ್ದನಿದ್ದೇನೆ ಎಂದು ಸಿಪಿ ಯೋಗೇಶ್ವರ್ ಸವಾಲು ಹಾಕಿದರು.

 ಪ್ರತಿದಿನ ಕ್ಷೇತ್ರ ಸಂಚಾರ

ಕುಮಾರಸ್ವಾಮಿಯವರು ಶಾಸಕರಾಗಿ ಆಯ್ಕೆಯಾದ ನಂತರ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದು, ಅಧಿಕಾರದಲ್ಲಿದ್ದ ವೇಳೆ ತಾಲ್ಲೂಕಿಗೆ ಒಂದೆರಡು ಬಾರಿ ಮಾತ್ರ ಭೇಟಿ ನೀಡಿದ್ದಾರೆ, ಅದು ಬಿಟ್ಟರೆ ಕ್ಷೇತ್ರಕ್ಕೆ  ಅತ್ತೆ ಮನೆಗೆ ಅಳಿಯ ಬಂದ ರೀತಿಯಲ್ಲಿ ಬಂದು ಹೋಗುತ್ತಿದ್ದರು. ಇದೀಗ ನಾನು ತಾಲ್ಲೂಕಿನಲ್ಲಿ ಸಕ್ರಿಯನಾಗುತ್ತಿರುವುದನ್ನು ಕಂಡು ಪ್ರತಿದಿನ ತಾಲ್ಲೂಕಿಗೆ ಬರುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಸೋಲಿನ ಭೀತಿ ಕಾಡಲಾರಂಭಿಸಿದ್ದು, ಸೋಲಿನ ಹತಾಶೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಆರೋಪಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button