ಮಂಡ್ಯ ಜನರಿಗೆ ತೊಂದರೆ ಕೊಟ್ರೆ ಸುಮ್ಮನಿರಲ್ಲ: ಸಂಸದೆ ಸುಮಲತಾ

ಮೈಸೂರು: ಮೈಸೂರು, ಬೆಂಗಳೂರು ಹೆದ್ದಾರಿ ಪ್ರಾಜೆಕ್ಟ್ ಒಳ್ಳೆಯದ್ದು. ಆದರೆ ಮಂಡ್ಯ ಜನರಿಗೆ ತೊಂದರೆ ಕೊಟ್ಟರೆ ನಾನು ಸುಮ್ಮನಿರಲ್ಲ ಎಂದು ಮಂಡ್ಯ ಸಂಸದೆ, ನಟಿ ಸಮಲತಾ ಅಂಬರೀಶ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ, ಮಾಧ್ಯಮಗಳಲ್ಲಿ ದಿನ ನಿತ್ಯ ಏನು ಬೇಕಾದ್ರೂ ಹೇಳಬಹುದು. ಆದರೆ ಜನರ ಬಳಿ ಹೋದರೆ ನಿಜವಾದ ಸಮಸ್ಯೆ ಗೊತ್ತಾಗುತ್ತೆ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹಾಗೆ ತಿರುಗೇಟು ನೀಡಿದರು.
ಶಿಂಷಾ ನದಿ ಬಳಿ ಹೆದ್ದಾರಿ ಸೇತುವೆ ವಿಚಾರವಾಗಿ ಪ್ರತಿಕ್ರಿಯಿಸಿದ ಸುಮಲತಾ, ನಾನು ಪ್ರತಿಭಾಟನಾ ಸ್ಥಳಕ್ಕೆ ಹೋಗಿದ್ದೇನೆ. ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಆಯಾ ಕ್ಷೇತ್ರದ ಸಂಸದ ಆಯಾ ಕ್ಷೇತ್ರದ ಬಗ್ಗೆ ಕೇಳಿದರೆ ಪ್ರತಿಕ್ರಿಯೆ ಸಿಗುತ್ತದೆ. ಯಾರು ಬೇಕಾದರೂ ಪತ್ರ ಬರೆದಿರಬಹುದು. ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಮಾಡಿದ ಕೆಲಸ ಮಾಡಿಲ್ಲ ಅಂತಾ ಹೇಳಿದರೆ ನಾನು ಸುಮ್ಮನಿರಲ್ಲ.
ಟಾರ್ಗೆಟ್ ಮಾಡುವುದು ಮೊದಲ ದಿನದಿಂದಲೂ ನಡೆದಿದೆ. ನನ್ನ ಜಿಲ್ಲೆಗೆ ಸಂಬಂಧಪಟ್ಟ ವಿಚಾರ ಮಾತ್ರ ನಾನು ಮಾತನಾಡುತ್ತೇನೆ. ನಾನು ಏನೇ ಮಾಡಿದರೂ ವಿರೋಧ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಎಲ್ಲರದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾನು ಕೆಲಸ ಮಾಡುತ್ತೇನೆ, ಜನ ನನ್ನ ಪರ ಮಾತನಾಡುತ್ತಾರೆ ಅನ್ನೋ ಭಯ ಎಂದು ಹೇಳಿದರು.
