ಪೊಲೀಸ್ ವಾಹನ ಅಪಘಾತ ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು

ಹುಬ್ಬಳ್ಳಿ: ಸಾರಿಗೆ ನಿಯಮ ಉಲ್ಲಂಘನೆ ಮಾಡಿ ಅಡ್ಡಾದಿಡ್ಡಿ ಓಡಾಡುವ ವಾಹನಗಳಿಗೆ ದಂಡ ಹಾಕಬೇಕಾದ ಪೊಲೀಸರೇ ಇಲಾಖೆಯ ವಾಹನವನ್ನು ಕುಡಿದ ಮತ್ತಿನಲ್ಲಿ ಬ್ಯಾರಿಕೇಡ್ಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಉತ್ತರ ಸಂಚಾರಿ ಠಾಣೆಯ ಎಎಸ್ಐ ಉದಯ್ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿಯವರನ್ನು ಈಗ ಅಮಾನತು ಮಾಡಲಾಗಿದೆ. ಹೋಳಿ ಹಬ್ಬದ ದಿನದಂದು ಭದ್ರತೆ ನೀಡುವ ನಿಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆ ದಿನ ಕರ್ತವ್ಯ ನಿರ್ವಹಣೆ ಬಳಿಕ ಮುತ್ತು ಮಾಗಿ, ಉದಯ್ ದೊಡ್ಡಮನಿ ಹೈವೆ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯಕ್ಕೆ ತೆರಳಿದ್ದರು.
ಮುತ್ತು ಮಾಗಿ ಕುಡಿದ ಮತ್ತಿನಲ್ಲಿ ವಾಹನವನ್ನು ಬ್ಯಾರಿಕೇಡ್ಗೆ ಗುದ್ದಿ ಅಪಘಾತ ಮಾಡಿದರು. ಅಪಘಾತದಲ್ಲಿ ಮುತ್ತು ಮಾಗಿ ಮತ್ತು ಉದಯ್ ದೊಡ್ಡಮನಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು, ಈ ಇಬ್ಬರು ಪೊಲೀಸರು ಕರ್ತವ್ಯಲೋಪ ಎಸಗಿದ್ದು ತಿಳಿದು ಬಂದಿದ್ದು.
ತನಿಖಾ ವರದಿ ಬಂದ ಬಳಿಕ ಈಗ ಇಬ್ಬರನ್ನೂ ಅಮಾನತು ಮಾಡಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ ಹೊರಡಿಸಿದ್ದಾರೆ.
