ಕೆಂಪುಕೋಟೆ ಮೇಲೆ ಕೇಸರಿ ಧ್ವಜ ವಿಚಾರ: ಸಚಿವ ಈಶ್ವರಪ್ಪ ವಿರುದ್ಧ ಮೇಲ್ಮನೆಯಲ್ಲೂ ಕೋಲಾಹಲ

ಬೆಂಗಳೂರು: ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಸಚಿವ ಈಶ್ವರಪ್ಪ ಹೇಳಿಕೆ ವಿಚಾರ ವಿಧಾನಪರಿಷತ್ ನಲ್ಲೂ ಬುಧವಾರ ಪ್ರತಿಧ್ವನಿಸಿ, ಕೋಲಾಹಲಕ್ಕೆಡೆ ಮಾಡಿಕೊಟ್ಟಿತು. ಇದರಿಂದ ಅಧಿವೇಶನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ನಡೆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕೈಗೆತ್ತಿಕೊಳ್ಳಲು ಸಭಾಪತಿ ಮುಂದಾದರು. ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸಚಿವ ಈಶ್ವರಪ್ಪ ಹೇಳಿಕೆ ಕುರಿತು ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಪ್ರಶ್ನೋತ್ತರ ಅವಧಿ ನಂತರ ಅವಕಾಶ ನೀಡುತ್ತೇನೆ ಎಂದು ಸಭಾಪತಿ ಹೇಳಿದರು. ಕಾಂಗ್ರೆಸ್ ಸದಸ್ಯರು ಅದಕ್ಕೆ ಜಗ್ಗಲಿಲ್ಲ. ಹರಿಪ್ರಸಾದ್ ಜತೆ ದನಿಗೂಡಿಸಿದ ಕೆ.ಗೋವಿಂದರಾಜು, ಪ್ರಕಾಶ್ ರಾಥೋಡ್, ಸಲೀಂ ಅಹಮ್ಮದ್ ಮತ್ತಿತರು ಮೊದಲು ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಸಚಿವ ಈಶ್ವರಪ್ಪ ಹೇಳಿಕೆ ಸಂವಿಧಾನ ವಿರೋಧಿ, ರಾಷ್ಟ್ರಧ್ವಜಕ್ಕೆ ಮಾಡಿರುವ ಅಪಮಾನ ಎಂಬುದು ಕಾಂಗ್ರೆಸ್ ಸದಸ್ಯರ ಪಟ್ಟಾಗಿತ್ತು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ವಿರೋಧಿಸಿದರು. ಇದಕ್ಕೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಎಂ.ಕೆ.ಪ್ರಾಣೇಶ್, ಅರುಣ್ ಶಹಪೂರ್, ಶಶಿಲ್ ನಮೋಶಿ ಮತ್ತಿತರ ಸದಸ್ಯರು ದನಿಗೂಡಿಸಿದರು. ಕಾಂಗ್ರೆಸ್ ಸದಸ್ಯರು ಹಠಕ್ಕೆ ಬಿದ್ದಿದ್ದಾರೆ ಎಂದು ಆರೋಪಿಸಿದ ಅವರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿಜಾಬ್ ಧರಿಸಿದರೆ ಅತ್ಯಾಚಾರ ದರ ಕಡಿಮೆಯಾಗುತ್ತದೆ ಎಂಬ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ಬಗ್ಗೆ ಮೊದಲು ಚರ್ಚೆಯಾಗಲಿ ಎಂದು ಬಿಜೆಪಿ ಸದಸ್ಯರು ಪ್ರತಿಪಟ್ಟು ಹಿಡಿದರು. ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾಪರೋಪ ಏರ್ಪಟ್ಟು ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಸ್ಪಷ್ಟವಾಗಿ ಸಂವಿಧಾನದ ಉಲ್ಲಂಘನೆಯಾಗಿದೆ. ಅದನ್ನು ನೋಡಿಕೊಂಡು ನಾವು ಸುಮ್ಮನಿರಲು ಸಾಧ್ಯವೆ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರೆ, ಸಚಿವ ಈಶ್ವರಪ್ಪ ರಾಷ್ಟ್ರದ್ರೋಹದ ಹೇಳಿಕೆ ನೀಡಿದ್ದಾರೆ ಎಂದು ಸಲೀಂ ಅಹಮದ್ ದೂರಿದರು.
ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪತ ವಾಗ್ದಾಳಿ ಮತ್ತು ವಾಕ್ಸಮರ ನಡೆದು ಯಾರು ಏನು ಹೇಳುತ್ತಿದ್ದಾರೆ ಎಂದು ಗೊತ್ತಾಗದ ಸ್ಥಿತಿ ಏರ್ಪಟ್ಟಿತು. ಮಧ್ಯಪ್ರವೇಶಿಸಿದ ಸಭಾಪತಿ ಪ್ರಶ್ನೋತ್ತರ ನಂತರ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಎಂದು ಸದನವನ್ನು ಕೆಲಕಾಲ ಮುಂದೂಡಿದರು.
ಮತ್ತೆ ಸದನ ಸೇರಿದಾಗ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಮುಂದುವರಿಸಿದರು. ಈ ಹಂತದಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಸಚಿವ ಈಶ್ವರಪ್ಪ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಒಬ್ಬ ಸಚಿವರ ವಿರುದ್ಧ ತೇಜೋವಧೆ ಮಾಡುವುದು ಸರಿಯಲ್ಲ ಎಂದರು. ಇದರಿಂದ ಕಾಂಗ್ರೆಸ್ ಸದಸ್ಯರು ಇನ್ನಷ್ಟು ಕೆರಳಿದರು. ಸದನಲ್ಲಿ ಮತ್ತೆ ಗದ್ದಲ-ಗೊಂದಲ ಮುಂದುವರಿಯಿತು.
