ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಹೊಸ ರೂಪ: ಸಿಎಂ ಬೊಮ್ಮಾಯಿ

ಬೆಂಗಳೂರು: ಮಾರ್ಚ್ 4ರಂದು ಮಂಡಿಸಲು ಉದ್ದೇಶಿಸಿರುವ 2022-23 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯ ಬಜೆಟ್ ಕುರಿತು ವಿಧಾನಸೌಧದಲ್ಲಿಂದು ನಡೆದ ಇಲಾಖಾವಾರು ಆಯವ್ಯಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಬಕಾರಿ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಯಾವುದೆ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಾಗ ಬದಲಾವಣೆ ಆಗಲು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ವಿಚಾರಣೆ ಮಾಡಿ ಸರಿಪಡಿಸುವುದು ಎಲ್ಲರ ಕೆಲಸ ಎಂದರು.
ಕಿರುಕುಳ ತಪ್ಪಿಸುವೆ
ಇಲಾಖೆ ಬಗ್ಗೆ ಸಹಾನೂಭೂತಿ ಇದೆ. ಹಾಗೇಯೆ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಜೆಟ್‌ನಲ್ಲಿ ಇಲಾಖೆಗೆ ಹೊಸ ಸ್ವೂರಪ ನೀಡಲಾಗುವುದು. ಆರ್ಥಿಕ ಮಿತಿಗಳನ್ನು ನೋಡಿಕೊಂಡು ನೌಕರರಿಗೆ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಕಾನೂನುಗಳನ್ನು ಬದಲಾಯಿಸುವ ಸಂಬಂಧ ಗಮನಹರಿಸಲಾಗುವುದು ಎಂದು ತಿಳಿಸಿದರು.
ನಕಲಿ ಮದ್ಯ ವಿರುದ್ಧ ಉಗ್ರ ಕ್ರಮಕ್ಕೆ ಸೂಚನೆ
ರಾಜ್ಯದಲ್ಲಿ ನಕಲಿ ಮದ್ಯ ತಯಾರಿಕೆ ಮತ್ತು ಹೊರ ರಾಜ್ಯದಲ್ಲಿ ಆಗಮಿಸುವ ನಕಲಿ ಮದ್ಯ ತಡೆಗೆ ಸರ್ಕಾರ ಉಗ್ರ ಕ್ರಮ ಕೈಗೊಂಡಿದೆ. ಇದರಿಂದ ಸರ್ಕಾರಕ್ಕೆ ಆದಾಯ ಕೂಡ ಬರುತ್ತದೆ. ನಕಲಿ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಮುಲಾಜಿಲ್ಲದೇ ಅಮಾನತು ಮಾಡುವಂತೆ ಇಲಾಖಾ ಆಯುಕ್ತರಿಗೆ ಇದೇ ಸಂದರ್ಭದಲ್ಲಿ ಸಿಎಂ ಸೂಚಿಸಿದರು.
ವ್ಯಾಪಾರ, ಆದಾಯ ಮೂರು ಮುಖ್ಯ ಅಂಶಗಳನ್ನು ಇಟ್ಟುಕೊಂಡು ಕೆಲಸಮಾಡುವಂತೆ ಸೂಚಿಸಿದರಲ್ಲದೇ ಸಮಯ ನೀಡಿದರೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಮದ್ಯದ ದರ ಹೆಚ್ಚಳವಿಲ್ಲ
ಅಬಕಾರಿ ಸಚಿವ ಕೆ.ಗೋಪಾಲಯ್ಯ, ರಾಜ್ಯದಲ್ಲಿ ಮದ್ಯದ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ ಮಾಡಿಲ್ಲ ಎಂದರು. ಇಲಾಖೆಯ ಹಣಕಾಸಿನ ಪರಿಸ್ಥಿತಿಯನ್ನು ಸಿಎಂ ಪರಾಮರ್ಶೆ ಮಾಡಿ, ಕೆಲವು ಸಲಹೆ ಸೂಚನೆ ನೀಡಿದ್ದಾರೆ ಅಲ್ಲದೆ ಇಲಾಖೆಯ ಅಭಿವೃದ್ಧಿಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.
ಶುಕ್ರವಾರ ಹಣಕಾಸು ಇಲಾಖೆಯ ಕಾರ್ಯದರ್ಶಿಗಳು ಮತ್ತು ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ಕಾರ್ಯಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು. ಇಲಾಖೆಯ ಕೆಲವು ಬೇಡಿಕೆಗಳ ಬಗ್ಗೆಯೂ ಸಿಎಂ ಗಮನ ಸೆಳೆಯಲಾಗಿದೆ. ಇದಕ್ಕೆ ಅವರು ಬಜೆಟ್ ನಲ್ಲಿ ಅಥವಾ ಆ ನಂತರ ಸೂಕ್ತ ವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು.
ಬಾಂಬೆ ಬಾಯ್ಸ್ ಬಿಜೆಪಿ ಬಿಡಲ್ಲ
ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜೀನಾಮೆ ಕೊಟ್ಟು ಬಂದ 17 ಜನ ಬಿಜೆಪಿಯಿಂದ ಗೆದ್ದು ಶಾಸಕರಾದ ಮೇಲೆ ಪಕ್ಷ ಅಧಿಕಾರ ನೀಡಿದೆ. ಯಡಿಯೂರಪ್ಪ ಅವರು ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಂಡಿದ್ದಾರೆ. ಆದ್ದರಿಂದ ಯಾರೂ ಕೂಡ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
