ಮಹಿಳೆಯ ಆತ್ಯಾಚಾರ, ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಅಗ್ರಹ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಬಳಿ ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಅಗ್ರಹಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು.
ಶ್ರೀ ಕನಕ ಸೇವಾ ಸಮಿತಿ ಧಾರವಾಡ ಘಟಕದ ನೇತೃತ್ವದಲ್ಲಿ ನಗರದ ಸ್ಟೇಷನ್ ರಸ್ತೆಯ ಡಾ.ಬಿ ಆರ್ ಅಂಬೇಡ್ಕರ್ ಮೂರ್ತಿಯಿಂದ ಸಂಗೊಳ್ಳಿ ರಾಯಣ್ಣ ವೃತದವರೆಗೂ ಪ್ರತಿಭಟನೆ ಮೇರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿ ವಿರುದ್ಧ ಹಾಗೂ ಪೊಲೀಸ್ ಇಲಾಖೆ ಸೇರಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕುರಿಗಾಹಿ ಮಹಿಳೆ ಲಕ್ಷ್ಮಿ ಮೇಲೆ ಅತ್ಯಾಚಾರ ಮಾಡಿ ಯರಗುಪ್ಪಿ ಗ್ರಾಮದ ವ್ಯಕ್ತಿ ಕೊಲೆಗೈದಿದ್ದಾನೆ. ಈತನ ಹೀನ ಕೃತ್ಯದಿಂದ ಅಲೆಮಾರಿ ಕುರಿಗಾಹಿ ಸಮುದಾಯವು ಆತಂಕ ಪಡುವಂತಾಗಿದೆ. ಈಗಾಗಲೇ ಕುಂದಗೋಳ ಪೊಲೀಸರು ಆರೋಪಿಯನ್ನು ಬಂಧನ ಮಾಡಿಸಿದ್ದು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಪೊಲೀಸ್ ಇಲಾಖೆಯವರು ತನಿಖೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇಂತಹ ಯಾವುದೇ ಹೆಜ್ಜೆಯನ್ನು ಪೊಲೀಸ ಇಲಾಖೆ ಇಡಬಾರದು. ಕೂಡಲೇ ಆರೋಪಿಯ ವಿರುದ್ಧ ಸರಿಯಾದ ಸಾಕ್ಷಿ ಸಂಗ್ರಹಿಸಿ, ಯಾವುದೇ ಪ್ರಭಾವಕ್ಕೆ ಒಳಗಾಗದೆ ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ಅಗ್ರಹಿಸಿದರು.
ರಾಜ್ಯ ಸರ್ಕಾರ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಲಕ್ಷ್ಮಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಕೊಲೆ ಆರೋಪಿಯ ವಿರುದ್ಧ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರದಂತೆ ಸರ್ಕಾರ ಸೂಚನೆ ನೀಡಬೇಕು, ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಡಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.




