ರಾಜ್ಯದಲ್ಲಿ 85 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು

ಬೆಂಗಳೂರು: ರಾಜ್ಯದಲ್ಲಿ 85 ಸಾವಿರಕ್ಕೂ ಹೆಚ್ಚು ಅಕ್ರಮ ಪಡಿತರ ಚೀಟಿಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹಿಂದಿರುಗಿಸದ 85,107 ಮಂದಿಯ ಕಾರ್ಡುಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದು ಮಾಡಿದೆ.
ಅನರ್ಹರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಸರ್ಕಾರ ಆದೇಶಿಸಿತ್ತು. ಆದರೆ ಅನರ್ಹರು ವಾಪಸ್ ಮಾಡಿಲ್ಲವೆಂಬ ಕಾರಣಕ್ಕೆ ತೆರಿಗೆ ಪಾವತಿ ಮಾಡುತ್ತಿರುವವರ ದತ್ತಾಂಶವನ್ನು ಆದಾಯ ತೆರಿಗೆ ಇಲಾಖೆ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಪಡಿತರಚೀಟಿದಾರರ ಇಕೆವೈಸಿ ಪ್ರಕ್ರಿಯೆ ನಡೆಸಿದ ನಂತರ 85,204 ಮಂದಿ ತೆರಿಗೆ ಪಾವತಿದಾರರು ಬಿಪಿಎಲ್ ಮತ್ತು ಅಂತ್ಯೋದಯ ಚೀಟಿ ಪಡೆದಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಆದಾಯ ಪಾವತಿ ಮಾಡುತ್ತಿದ್ದವರ ಮಾಹಿತಿಯನ್ನು ಜಿಲ್ಲೆಗಳಿಗೆ ಕಳುಹಿಸಿ ಪರಿಶೀಲಿಸಿದ್ದು ರಾಜ್ಯದ ಒಟ್ಟು 85,107 ಮಂದಿಯ ಪಡಿತರ ಕಾರ್ಡುಗಳನ್ನು ಇಲಾಖೆ ರದ್ದು ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಶಾಮ್ಲಾ ಇಕ್ಬಾಲ್ ಮಾಹಿತಿ ನೀಡಿದ್ದಾರೆ.
1360 ಅಂತ್ಯೋದಯ ಹಾಗೂ 34,908 ಬಿಪಿಎಲ್ ಕಾರ್ಡುಗಳು ಸೇರಿದಂತೆ 36,268 ಕಾರ್ಡುಗಳನ್ನು ಪಡಿತರ ಚೀಟಿದಾರರು ಸ್ವಯಂ ಪ್ರೇರಿತರಾಗಿ ವಾಪಸ್ ನೀಡಿದ್ದಾರೆ. ಬಿಪಿಎಎಲ್ ಕುಟುಂಬಸ್ಥರಲ್ಲಿರುವ ಸದಸ್ಯರು ವೈಯಕ್ತಿಕ ಕಾರಣದಿಂದ ಕುಟುಂಬದಿಂದ ಬೇರ್ಪಟ್ಟಿದ್ದರೆ ಅವರ ಹೆಸರನ್ನು ತೆಗೆದು ಹಾಕಬಹುದಾಗಿತ್ತು. ಆದರೆ ಹೆಸರು ತೆಗೆಯದೆ ಇದ್ದ ಕಾರಣ ಅಂತಹ ಕಾರ್ಡುಗಳು ರದ್ದಾಗಿವೆ.
ಜಿಲ್ಲಾವಾರು ರದ್ದಾದ ವಿವರ:
ಬೆಂಗಳೂರು: 14,366, ಬೆಂಗಳೂರು ಪಶ್ಚಿಮ: 4232, ಶಿವಮೊಗ್ಗ: 4117, ಮಂಡ್ಯ: 3396, ಗದಗ: 3490, ಬಾಗಲಕೋಟೆ: 1295, ಬಳ್ಳಾರಿ: 2584, ಬೆಂಗಳೂರು ಪೂರ್ವ: 1423, ಬೆಂಗಳೂರು ಉತ್ತರ:1950, ಬೆಂಗಳೂರು ದಕ್ಷಿಣ: 2712, ಬೆಳಗಾವಿ: 3273, ಬೆಂಗಳೂರು ಗ್ರಾಮಾಂತರ: 3235, ಬೀದರ್:1456, ಚಾಮರಾಜನಗರ: 797, ಚಿಕ್ಕಬಳ್ಳಾಪುರ: 2465, ಚಿಕ್ಕಮಗಳೂರು: 1676, ಚಿತ್ರದುರ್ಗ:1640, ದಕ್ಷಿಣ ಕನ್ನಡ: 1595, ದಾವಣಗೆರೆ: 2049, ಧಾರವಾಡ: 1943, ಹಾಸನ: 3490, ಹಾವೇರಿ: 1052, ಕಲಬುರಗಿ: 2071, ಕೊಡಗು: 541, ಕೋಲಾರ: 3344, ಕೊಪ್ಪಳ:1092, ಮೈಸೂರು: 3691, ರಾಯಚೂರು: 1856, ರಾಮನಗರ: 3081, ಶಿವಮೊಗ್ಗ: 2154, ಉಡುಪಿ: 2671, ಉತ್ತರ ಕನ್ನಡ: 1167, ವಿಜಯಪುರ: 1229, ಯಾದಗಿರಿ: 710 ಹೀಗೆ ಒಟ್ಟು: 85,107 ಪಡಿತರ ಕಾರ್ಡುಗಳು ರದ್ದಾಗಿವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
