ಗದ್ದಲದ ನಡುವೆ, ತರಾತುರಿಯಲ್ಲಿ ವೇತನ-ಭತ್ಯೆ ಹೆಚ್ಚಿಸಿಕೊಂಡ ಶಾಸಕರು!

ಬೆಂಗಳೂರು: ಸಚಿವ ಈಶ್ವರಪ್ಪ ವಜಾಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಕಳೆದ 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದೆ. ಮತ್ತೊಂದೆಡೆ ಸರ್ಕಾರ ಕೂಡ ಪ್ರತಿಪಕ್ಷದ ಬೇಡಿಕೆಗೆ ಮಣಿಯದೇ ಹಠಮಾರಿ ಧೋರಣೆ ಮುಂದುವರಿಸಿದೆ. ಇದರಿಂದ ಸಾರ್ವಜನಿಕ ಸಮಸ್ಯೆಗಳು ಚರ್ಚೆಯಾಗಬೇಕಾದ ಪ್ರಸಕ್ತ ಅಧಿವೇಶನದಲ್ಲಿ ಸದನದ ಕಲಾಪ ಸಂಪೂರ್ಣ ವ್ಯರ್ಥವಾಗಿದೆ. ಇದರ ನಡುವೆಯೇ ವಿಧಾನಮಂಡಲದ ಉಭಯ ಸದನಗಳಲ್ಲಿ ಶಾಸಕರ ವೇತನ ಭತ್ಯೆ ಹೆಚ್ಚಳ ಮಾಡುವ ವಿಧೇಯಕವನ್ನು ಮಂಗಳವಾರ ತರಾತುರಿಯಲ್ಲಿ ಅಂಗೀಕರಿಸಲಾಗಿದೆ. ಇದರ ಜತೆಗೆ ಸದನದಲ್ಲಿ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕವೂ ಅಂಗೀಕೃತವಾಗಿದೆ. ಅಚ್ಚರಿಯ ವಿಷಯವೆಂದರೆ ಜೆಡಿಎಸ್ ನ ಬಂಡೆಪ್ಪ ಕಾಶಂಪೂರ್ ವಿಧೇಯಕಕ್ಕೆ ಏಕಾಂಗಿಯಾಗಿ ವಿರೋಧ ವ್ಯಕ್ತಪಡಿಸಿದ್ದನ್ನು ಬಿಟ್ಟರೆ ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಉಳಿದವರಾರು ವಿಧೇಯಕ ಕುರಿತು ಕಮಕ್-ಕಿಮಕ್ ಎಂದಿಲ್ಲ.
ಉಭಯ ಸದನಗಳಲ್ಲಿ ಅಂಗೀಕೃತವಾಗಿರುವ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕದ ಪ್ರಕಾರ, ಸಚಿವ ಸಂಭಳ-ಸಾರಿಗೆ ಭತ್ಯೆ ಶೇ.50ರಷ್ಟು ಹೆಚ್ಚಳವಾಗಲಿದೆ. ಮುಖ್ಯಮಂತ್ರಿಗೆ ಪ್ರತಿ ಮಾಹೆ ಇದ್ದ 50 ಸಾವಿರ ವೇತನವನ್ನು 75 ಸಾವಿರಕ್ಕೆ ಹೆಚ್ಚಾಗಲಿದೆ. ಕ್ಯಾಬಿನೆಟ್ ದರ್ಜೆ ಸಚಿವರ ಆತಿಥ್ಯ ಭತ್ಯೆ ವಾರ್ಷಿಕ 3 ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ, ಮನೆ ಬಾಡಿಗೆ 80 ಸಾವಿರದಿಂದ 1 ಲಕ್ಷದ 20 ಸಾವಿರಕ್ಕೆ, ಮನೆ ನಿರ್ವಹಣಾ ವೆಚ್ಚ 20 ರಿಂದ 30 ಸಾವಿರಕ್ಕೆ ಏರಿಕೆಯಾಗಲಿದೆ.
ಸಂಪುಟ ದರ್ಜೆ ಸಚಿವರ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಿಂದ 2 ಸಾವಿರ ರೂಪಾಯಿವರೆಗೆ ಪೆಟ್ರೋಲ್ ಗಾಗಿ ಹೆಚ್ಚಳ ಮಾಡಲಾಗಿದೆ.
ಈ ನಡುವೆ ಮೇಲ್ಮನೆಯಲ್ಲಿ ಧರಣಿ ನಿರತ ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆಯೇ, 2022ನೇ ಸಿವಿಲ್ ಸರ್ವೀಸ್ ಮಸೂದೆಯನ್ನು ಅಂಗೀಕರಿಸಲಾಗಿದೆ.
