IPL 2021: ಇಂಗ್ಲೆಂಡ್ ನ ಆರು ಆಟಗಾರರು ಐಪಿಎಲ್ ನಿಂದ ಔಟ್

ಲಂಡನ್ : ವಿವಿಧ ಕಾರಣಗಳಿಗಾಗಿ ಇಂಗ್ಲೆಂಡ್ ನ ಆರು ಮಂದಿ ಆಟಗಾರರು ಕೊಲ್ಲಿ ರಾಷ್ಟ್ರದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯವನ್ನು ಕೋವಿಡ್ ಕಾರಣವೊಡ್ಡಿ ರದ್ದು ಮಾಡಿರುವುದಕ್ಕೆ ಆಟಗಾರರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿದ್ದರೂ, ಈ ತೀರ್ಮಾನಕ್ಕೆ ಆಟಗಾರರ ಕಾರಣ ಭಿನ್ನವಾಗಿದೆ.
ಜಾನಿ ಬೈರ್ಸ್ಟಾ, ಕ್ರಿಸ್ ವೋಕ್ಸ್, ಡೇವಿಡ್ ಮಾಲನ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ಹಿಂದೆ ಸರಿದ ಆಟಗಾರರು. ಡೇವಿಡ್ ಮಾಲನ್ ಅವರ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ದಕ್ಷಿಣ ಆಫ್ರಿಕಾ ಏಡನ್ ಮಾರ್ಕ್ರಾಮ್ ಸೇರ್ಪಡೆಯಾಗಿದ್ದಾರೆ.
ಬೇರ್ಸ್ಟಾ ( ಸನ್ ರೈಸ್ ಹೈದರಾಬಾದ್), ಮಾಲನ್ ಮತ್ತು ಬಟ್ಲರ್ (ರಾಜಸ್ಥಾನ್ ರಾಯಲ್ಸ್), ವೋಕ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಅವರು ಟಿ 20 ವಿಶ್ವಕಪ್ ತಂಡದಲ್ಲಿದ್ದು, ಆ್ಯಶಸ್ ಸರಣಿಗೂ ಸೇರ್ಪಡೆಯಾಗುವ ಆಟಗಾರರು. ಬಟ್ಲರ್ ಮತ್ತು ವೋಕ್ಸ್ ಮಗುವಿನ ತಂದೆಯಾದ ಕಾರಣ ಅವರಿಗೆ ಬಿಡುವು ಅನಿವಾರ್ಯವಾಗಿದೆ. ಕ್ವಾರಂಟೈನ್, ನಾಲ್ಕು ತಿಂಗಳ ಕಾಲ ಮನೆಯಿಂದ ದೂರ ಇರಬೇಕಾದ ಅನಿವಾರ್ಯತೆ ಈ ಎಲ್ಲ ಕಾರಣಗಳಿಗಾಗಿ ಈ ಆಟಗಾರರು ಐಪಿಎಲ್ ನಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
